
ರಾಜ್ಯದಲ್ಲಿ 22 ಲಕ್ಷ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿಗಳನ್ನು ರದ್ದು ಮಾಡಿರುವುದನ್ನ ಖಂಡಿಸಿ ತಾಲೂಕು ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಬಿಜೆಪಿ ಘಟಕದ ವತಿಯಿಂದ ಗ್ಯಾರೆಂಟಿ ಯೋಜನೆಗಳ ವಿಫಲ ಹಾಗೂ ಪಡಿತರ ಚೀಟಿ ರದ್ದು ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಆಹಾರ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕು ಜನತೆಯ ಒಟ್ಟು 1000 (ಒಂದು ಸಾವಿರ) ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ತಾಲ್ಲೂಕಿನಲ್ಲಿ ವಾಸಿಸುವಂತಹ ಜನರು ಮಧ್ಯಮ ವರ್ಗ, ಹಾಗೂ ಬಡತನ ರೇಖೆಯನ್ನು ಹೊಂದಿರುವ ಜನರು ವಾಸವಿರುತ್ತಾರೆ. ಅಂತವರ ಪಡಿತರ ಚೀಟಿಯನ್ನು ರದ್ದುಗೊಳಿಸುವ ಮೂಲಕ ಅವರಿಗೆ ತೊಂದರೆಯನ್ನು ನೀಡುತ್ತಿರುವುದು ಖಂಡನೀಯ. ಆದ್ದರಿಂದ ಕೂಲಂಕುಷವಾಗಿ ಪರಿಶೀಲಿಸಿ ಅರ್ಹ ಹಾಗೂ ಮಧ್ಯಮ ವರ್ಗ, ಹಾಗೂ ಬಡತನ ರೇಖೆಯನ್ನು ಹೊಂದಿರುವ ಜನರಿಗೆ ಬಿ ಪಿ ಎಲ್ ಪಟಿತರ ಚೀಟಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ನಾಲ್ಕು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ, 10 ಕೆ.ಜಿ. ಅಕ್ಕಿ ನೀಡಿಲ್ಲ, ಯುವನಿಧಿ ತಲುಪಿಲ್ಲ, ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಅಂಗನವಾಡಿ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ವಾಲ್ಮೀಕಿ ನಿಗಮದ ನೌಕರರಿಗೆ ಸಂಬಳ ಬಂದಿಲ್ಲ. ಇಂತಹ ಜನ ವಿರೋಧಿ ನೀತಿಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ನಂತರ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೇ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂತಿ ವೆಂಟಕೇಶ್, ಕಾಡನೂರು ಪಂಚಾಯಿತಿ ಅಧ್ಯಕ್ಷ ಮನು ನಗರ ಸಭಾ ಸದಸ್ಯೆ ವತ್ಸಲ, ಬಿಜೆಪಿ ಮುಖಂಡರಾದ ಮುದ್ದಪ್ಪ, ಪ್ರಿಯಾಂಕ, ಸೇರಿದಂತೆ ಇತರರು ಉಪಸ್ಥಿತರಿದ್ದರು.