ತಾಯ ಗರ್ಭದಿಂದ ಹೊರಬಂದಾಗ, ಕರುಳು ಕತ್ತರಿಸಿದಾಗ ಮೂಡಿದ ಅನಾಥಭಾವ

ತಾಯ ಗರ್ಭದಿಂದುದಯಿಸಿದ ಕ್ಷಣದಿಂದ,

ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ,

ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ…..

ಹಸಿವು ಅಳು ನಗು ಮೊದಲಿನಾ ಅನುಭವಗಳು,

ತಾಯ ಅಪ್ಪುಗೆ, ತಂದೆಯ ಧ್ವನಿ ಗ್ರಹಿಸತೊಡಗಿದೆ,

ಮತ್ತಷ್ಟು ಚಲಿಸುವ ಆಕೃತಿಗಳನ್ನು ಕಂಡೆ,

ಅಕ್ಕ ಅಣ್ಣ ಅಜ್ಜ ಅಜ್ಜಿ ಎಂದರಿವಾಗತೊಡಗಿತು,

ಹಸು ಕರು ಕುರಿ ಕೋಳಿ ನಾಯಿ ಬೆಕ್ಕು ನನ್ನವೆಂದೇ ಭಾವಿಸಿದೆ,

ಅಮ್ಮಾ…ಅಪ್ಪಾ…ಅಜ್ಜೀ…
ತಾತಾ….ಅಣ್ಣಾ..ಅಕ್ಕಾ…
ಎಂದು ತೊದಲತೊಡಗಿದೆ,

ಹಾಲು ಅನ್ನ ಸಿಹಿ ಕಹಿ ಖಾರ ಒಗರು ರುಚಿಸತೊಡಗಿತು,

ಅ ಆ ಇ ಈ A B C D 1 2 3 4 ಅರ್ಥಮಾಡಿಕೊಳ್ಳತೊಡಗಿದೆ,

ಕಪ್ಪು ಬಿಳಿ ನೀಲಿ ಹಸಿರು ಕೆಂಪು ಗುರುತಿಸತೊಡಗಿದೆ,

ಟೀಚರು ಆಯಾ ಡಾಕ್ಟರು ಗೊತ್ತಾಗತೊಡಗಿದರು,

ಬೆಳಕು ನೀರು ಗಿಡ ಮರ ಹೂವು ನನ್ನೊಳಗಿಳಿಯತೊಡಗಿತು,

ಚಳಿ ಗಾಳಿ ಮಳೆ ಬಿಸಿಲು ತಿಳಿಯತೊಡಗಿತು,

ಸೈಕಲ್ಲು ಬೈಕು ಕಾರು ಬಸ್ಸು ರೈಲು ವಿಮಾನ ಆಶ್ಚರ್ಯವನ್ನುಂಟುಮಾಡತೊಡಗಿತು,

ರೇಡಿಯೋ ಟಿವಿ ಕಂಪ್ಯೂಟರು ಮೊಬೈಲುಗಳು ಕುತೂಹಲಕೆರಳಿಸತೊಡಗಿದವು,

ಕೋಪ ಅಸೂಯೆ ಭಯ ಕರುಣೆ ಪ್ರತಿಕ್ಷಣದ ಭಾವನೆಯಾಗತೊಡಗಿತು,

ಗಂಡು ಹೆಣ್ಣಿನ ವ್ಯತ್ಯಾಸ ಅಂತರ್ಗತವಾಗತೊಡಗಿತು,

ಕನ್ನಡ ಇಂಗ್ಲೀಷ್ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆಗಳ ಭಿನ್ನತೆಯೂ ಸ್ಪಷ್ಟವಾಗತೊಡಗಿತು,

ಗೆಳೆಯ ಗೆಳತಿಯರು, ಓದು ಆಟ ನೃತ್ಯ ಸಂಗೀತ ಖುಷಿಕೊಡತೊಡಗಿತು,

ಆಸ್ಪತ್ರೆ ಬ್ಯಾಂಕು ಅಂಗಡಿ ಹೋಟೆಲು ಸಿನಿಮಾ ಮಂದಿರ ಗಮನಕ್ಕೆ ಬರತೊಡಗಿತು,

ನನ್ನೂರು – ಬೆಂಗಳೂರು, ಕರ್ನಾಟಕ ಭಾರತ ಏಷ್ಯಾ ವಿಶ್ವ ಹತ್ತಿರ ಬಂದಂತಾಗತೊಡಗಿತು,

ಕಣ್ಣು ಕಿವಿ ಮೂಗು ಬಾಯಿ ಅದು ಇದು ಅಂಗಗಳ ಬೇಕು ಬೇಡಗಳು ಅನುಭವವಾಗತೊಡಗಿದವು,

ತತ್ವ ಸಿದ್ದಾಂತ ಮೌಲ್ಯ ಕೆಚ್ಚು ಹೋರಾಟ ಗಲಾಟೆ ಪ್ರಚಾರ ಮಹತ್ವಪಡೆಯತೊಡಗಿತು,

ಪ್ರೀತಿಯ ಭಾವ ಚಿಗುರತೊಡಗಿತು,

ಸಂಗಾತಿಯ ಸಾಮಿಪ್ಯಕ್ಕೆ ಮನಸ್ಸು ಜಾರತೊಡಗಿತು,

ಉದ್ಯೋಗ ಜವಾಬ್ದಾರಿ ಭವಿಷ್ಯ ಕಾಡತೊಡಗಿತು,

ಹಣ ಅಂತಸ್ತು ಅಧಿಕಾರ ಐಶ್ವರ್ಯಗಳ ಮೋಹ ಉಂಟಾಗತೊಡಗಿತು,

ನಾನು ನನ್ನದು ನನ್ನವರೆಂಬ ಕುಟುಂಬ ಬೇಕೆನಿಸತೊಡಗಿತು,

ಕಾಮ ಕ್ರೋದ ಲೋಭ ಮೋಹ ಮದ ಮತ್ಸರಗಳ ಸಮ್ಮಿಳಿತವಾಗತೊಡಗಿತು,

ವಂಶಾಭಿವೃದ್ಧಿಯೇ ಒಂದು ಘನಕಾರ್ಯವೆಂದು ಭಾಸವಾಗತೊಡಗಿತು,

ಮಗ ಮಗಳ ಶಿಕ್ಷಣ ಭವಿಷ್ಯ ಸುಖಸಂತೋಷ ಉದ್ಯೋಗವೇ ಬದುಕಿನ ಧ್ಯೇಯವೆಂದೆನಿಸತೊಡಗಿತು,

ಮಗಳಿಗೊಂದು ಮದುವೆ ಮಗನಿಗೊಂದು ಮದುವೆಯೇ ಪ್ರಾಮುಖ್ಯತೆ ಪಡೆಯುವಂತಾಯಿತು,

ಮಗಳು ಅಮೆರಿಕಾ, ಮಗ ಆಸ್ಟ್ರೇಲಿಯಾ ಪಾಲಾದರು,

ರಕ್ತ ಸಂಬಂಧಿಗಳು, ಬಂಧುಬಳಗದವರು, ಸ್ನೇಹಿತರು ಇದ್ದರು, ಎಲ್ಲವೂ ದೂರವಾದಂತೆನಿಸತೊಡಗಿತು,

ಮತ್ತೆ ತಾಯ ಗರ್ಭದಿಂದ ಹೊರಬಂದಾಗ, ಕರುಳು ಕತ್ತರಿಸಿದಾಗ ಮೂಡಿದ ಅನಾಥಭಾವ ಆವರಿಸಿಕೊಳ್ಳತೊಡಗಿತು,

ಸಾವಿನ ಭಯ ಕಾಡತೊಡಗಿತು,

ಪುನಃ ತಾಯ ಗರ್ಭ ಸೇರುವ ಮನಸ್ಸಾಯಿತು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *