
ತಾಯಿಯ ತಂಗಿ ಮಗನೇ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಸಮೀಪದ ಮನೆಯೊಂದರಲ್ಲಿ 2025ರ ನ.25ರಂದು ನಡೆದಿತ್ತು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷ ಅವರ ನೇತೃತ್ವದ ನಾರಾಯಣಸ್ವಾಮಿ, ಹರೀಶ್, ಸುನೀಲ್, ಸಚಿನ್, ಪ್ರವೀಣ್, ಫೈರೋಜ್, ಗಣಪತಿ ಪೊಲೀಸ್ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಕದ್ದ ಮಾಲನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ….
ಯಲಹಂಕ ಮೂಲದ ಪಾಲನಹಳ್ಳಿ ತೋಟದ ನಿವಾಸಿ ದರ್ಶನ್(22) ಬಂಧಿತ ಆರೋಪಿ…
ಬಂಧಿತನಿಂದ 40 ಗ್ರಾಂ ತೂಕದ ಲಾಂಗ್ ಚೈನ್, 20 ಗ್ರಾಂ ತೂಕದ ಉರಿ ಚೈನ್, 35 ಗ್ರಾಂ ತೂಕದ ಮಾಂಗಲ್ಯ ಚೈನ್, 12 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಉಂಗುರವನ್ನು ವಶಕ್ಕೆ ಪಡೆದ ಇನ್ಸ್ ಪೆಕ್ಟರ್ ಸಾದಿಕ್ ಪಾಷ ಅವರು ದೂರುದಾರರನ್ನು ಇಂದು ಠಾಣೆಗೆ ಕರೆಸಿ ಕಳೆದುಕೊಂಡಿದ್ದ ಚಿನ್ನಾಭರಣಗಳನ್ನು ಹಸ್ತಾಂತರ ಮಾಡಿದರು…

ಘಟನೆ ಹಿನ್ನೆಲೆ
ದೂರುದಾರಳ ತಾಯಿಯ ತಂಗಿ ಮಗ ದರ್ಶನ್ ಯಲಹಂಕದ ಮಾರ್ಕೇಟಿನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಅವನಿಗೆ ಹಣ ಬೇಕಾದಾಗ ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿಯಲ್ಲಿರುವ ದೂರುದಾರಳ ಮನೆಗೆ ಬಂದು ಕೇಳುತ್ತಿದ್ದನು. ಆಗ ಆಕೆ ಮರದ ಕಬೋರ್ಡನಿಂದ ಹಣ ನೀಡುತ್ತಿದ್ದರು. ಆನಂತರ ಆಕೆಗೆ ಆರೋಪಿ ದರ್ಶನ್ ವಾಪಸ್ಸು ತಂದುಕೊಡುತ್ತಿದ್ದನು.
ಈಗ್ಗೆ ಎರಡು ಮೂರು ಬಾರಿ ದೂರುದಾರಳ ಬಳಿಯಿಂದ ದರ್ಶನ್ ಹಣ ಪಡೆದುಕೊಂಡು ಹೋಗಿ ಮತ್ತೆ ವಾಪಸ್ಸು ತಂದುಕೊಟ್ಟಿದ್ದ. ಆ ಹಣವನ್ನು ದೂರುದಾರಳು ಮತ್ತೆ ಬೀಗ ತೆಗೆದು ಮರದ ಕಬೋರ್ಡನಲ್ಲಿ ಇಡುತ್ತಿದ್ದರು.

ಅದೇ ಕಬೋರ್ಡನಲ್ಲಿ ದೂರುದಾರಳ ಮದುವೆ ಸಮಯದಲ್ಲಿ ಖರೀದಿ ಮಾಡಿದ್ದ 40 ಗ್ರಾಂ ತೂಕದ ಲಾಂಗ್ ಚಿನ್, 20 ಗ್ರಾಂ ತೂಕದ ಉರಿ ಚೈನ್, 35 ಗ್ರಾಂ ತೂಕದ ಮಾಂಗಲ್ಯ ಚೈನ್, 12 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಉಂಗುರ ಇಡಲಾಗಿತ್ತು.
ದೂರುದಾರಳು ಅವುಗಳನ್ನು ಅಕ್ಷಯ ತೃತೀಯ ದಿನದಂದು ಅಂದರೆ 2025ರ ಏ.30ರಂದು ಹಾಕಿಕೊಂಡು ಅದೇ ದಿನ ಸಂಜೆ ಆವುಗಳೆಲ್ಲಾವನ್ನು ತೆಗೆದು ಅದೇ ಕಬೋರ್ಡನಲ್ಲಿಟಿದ್ದರು.
2025ರ ನ.25ರ ಸಂಜೆ 5.00 ಗಂಟೆಗೆ ದೂರುದಾರಳು ಊರಿಗೆ ಹೋಗಲು ಮರದ ಕಬೋರ್ಡ ತೆಗದು ನೋಡಲಾಗಿ 40 ಗ್ರಾಂ ತೂಕದ ಲಾಂಗ್ ಚೈನ್, 20 ಗ್ರಾಂ ತೂಕದ ಉರಿ ಚೈನ್, 35 ಗ್ರಾಂ ತೂಕದ ಮಾಂಗಲ್ಯ ಚೈನ್, 12 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಉಂಗುರ ನಾಪತ್ತೆ ಆಗಿತ್ತು.

ಆಗ ಆಕೆ ಗಾಬರಿಗೊಂಡು ಮನೆಯ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಅಕ್ಷಯ ತೃತೀಯ ದಿನದಿಂದ ಇಲ್ಲಿಯವರೆಗೆ ಆಕೆಯ ಮನೆಗೆ ದರ್ಶನ್ ಸುಮಾರು 5-6 ಸಲ ಬಂದು ಹೋಗಿದ್ದನಂತೆ, ಆತನು ಮನೆಗೆ ಬಂದ ಸಂಧರ್ಭದಲ್ಲಿ ಮಕ್ಕಳಿಗೆ ತಿಂಡಿ ತಿನ್ನಲು ಹಣ ನೀಡುತ್ತಿದ್ದನಂತೆ.
ಆಗ ಆಕೆ ಮಕ್ಕಳನ್ನು ಕರೆದುಕೊಂಡು ಬೇಕರಿ ಬಳಿ ತಿಂಡಿ ತಿನಿಸುಗಳನ್ನು ತರಲು ಹೋಗುತ್ತಿದ್ದರಂತೆ, ಆಗ ಮನೆಯಲ್ಲಿ ದರ್ಶನ್ ಒಬ್ಬನೇ ಇರುತ್ತಿದ್ದನಂತೆ. ಆನಂತರ ಆಕೆ ಮನೆಗೆ ಹೋದ ಮೇಲೆ ದರ್ಶನ್ ಮನೆಯಿಂದ ಹೊರ ಹೋಗುತ್ತಿದ್ದನಂತೆ. ಇತ್ತೀಚೆಗೆ ಆರೋಪಿ ದರ್ಶನ್ ಆಕೆಯ ಮನೆಗೆ ಬಂದಿರಲಿಲ್ಲವಂತೆ.
ಮನೆಯಲ್ಲಿನ ಸುಮಾರು 110 ಗ್ರಾಂ ತೂಕದ ಅಂದಾಜು ಮೌಲ್ಯ 12 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ದರ್ಶನ್ ಕದ್ದಿರಬಹುದು ಎಂದು ಶಂಕಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರಿನ ಮೇರೆಗೆ ದರ್ಶನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ….
ಆನ್ ಲೈನ್ ಗೇಮ್ ಚಟ: ಲಕ್ಷಾಂತರ ಸಾಲ: ಸಾಲ ತೀರಿಸಲು ಚಿನ್ನಾಭರಣ ಕಳವು

ಆನ್‌ಲೈನ್ ಗೇಮ್ ನಿಂದ ಲಕ್ಷಾಂತರ ಹಣ ಕಳೆದುಕೊಂಡಿದ್ದ ಆರೋಪಿ ದರ್ಶನ್, ಸಾಲ ತೀರಿಸಲು ಸಂಬಂಧಿಕರ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದಾನೆ. ಕದ್ದ ಮಾಲನ್ನು ಸುಮಾರು ಮೂರು ಲಕ್ಷಕ್ಕೆ ಮಣಪುರಂ ಗೋಲ್ಡ್ ಲೋನ್ ಹಾಗೂ ತನಗೆ ಗೊತ್ತಿರುವ ಒಡವೆ ಅಂಗಡಿಯಲ್ಲಿ ಗಿರವಿ ಇಟ್ಟಿದ್ದ…
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….