ಕೋಲಾರ:- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಅಧಿಕಾರಿಗಳು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವುದು ನಾಚಿಗೇಡಿನ ಸಂಗತಿಯಾಗಿದ್ದು, ಪ್ರಾಮಾಣಿಕ ಅಧಿಕಾರಿಯಾಗಿದ್ದ ವೆಂಕಟೇಶಪ್ಪ ವರ್ಗಾವಣೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೈವಾಡವಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಬಂಗಾರಪೇಟೆ ತಾಲೂಕು ತಹಶೀಲ್ದಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆಯಿಲ್ಲ. ರಾಜಕೀಯಕ್ಕೆ ಮಣಿದು ಕೆಲಸ ಮಾಡುವವರಿಗೆ ಮಾತ್ರ ಸ್ಥಾನವೇ ಎಂದು ಪ್ರಶ್ನಿಸಿದರು.
ಹಿಂದೆ ದಯಾನಂದ್ ತಹಶೀಲ್ದಾರ್ ಆಗಿದ್ದಾಗ ಸಾರ್ವಜನಿಕರ ಕೆಲಸ ಮಾಡಲು ರಾಜಕೀಯ ಮುಖಂಡರು ಬಿಡಲಿಲ್ಲ. ಸರ್ಕಾರಿ ಜಮೀನುಗಳನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದನ್ನು ಬಯಲಿಗೇಳೆದ ಕಾರಣದಿಂದ ಮಾನಸಿಕವಾಗಿ ಕಿರುಕುಳ ನೀಡಿ ಎತ್ತಂಗಡಿ ಮಾಡಿದರು. ಈಗ ವೆಂಕಟೇಶಪ್ಪ ಅವರಿಗೂ ಅದೇ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ವೆಂಕಟೇಶಪ್ಪ ಅವರು ಬಂಗಾರಪೇಟೆ ತಾಲೂಕಿನ ಎಸ್.ಎನ್ ಸಿಟಿ ಬಡಾವಣೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಒತ್ತುವರಿಯಾಗಿರುವುದನ್ನು ಕಂಡು ಹಿಡಿದು ಸರ್ಕಾರಕ್ಕೆ ವರದಿ ಸಲ್ಲಿಸಿದರು. ಇದನ್ನೆ ನೆಪವಾಗಿ ಇಟ್ಟುಕೊಂಡು ಸಾರ್ವಜನಿಕ ವಲಯದಲ್ಲಿ ಟೀಕೆ ಮಾಡಿ, ಸರ್ಕಾರದ ಮೇಲೆ ಒತ್ತಡ ತಂದು ಅವಧಿಗೂ ಮುಂಚೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ವರ್ಗಾವಣೆ ಮಾಡಿಸಿದ್ದಾರೆ ಎಂದು ದೂರಿದರು.
ಜನಪ್ರತಿನಿಧಿಗಳ ತಾಳಕ್ಕೆ ಕುಣಿಯಲು ಅಧಿಕಾರಿಗಳದೇನು ತಾತ್ಕಾಲಿಕ ಹುದ್ದೆಯಲ್ಲ, ಸಾರ್ವಜಕರ ಸಮಸ್ಯೆಗಳಿಗೆ ಸ್ಪಂದಿಸುವ, ಸರ್ಕಾರಿ ಅಸ್ತಿಗಳನ್ನು ಉಳಿಸಿವ ಮಹತ್ತರವಾದ ಜವಾಬ್ದಾರಿ ಇದೆ. ಸ್ವಾತಂತ್ರವಾಗಿ ಕೆಲಸ ಮಾಡಲು ಜನಪ್ರತಿನಿಧಿಗಳು ಅವಕಾಶ ನೀಡಬೇಕು ಸಲಹೆ ನೀಡಿದರು.