ತಹಶೀಲ್ದಾರ್ ಹೆಸರಿನ ನಕಲಿ ಸಹಿ ಬಳಸಿ ಮುಜರಾಯಿ ಇಲಾಖೆಯ ಲಕ್ಷ ಲಕ್ಷ ಹಣ ದೋಖಾ: ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ದೂರು ದಾಖಲು: ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು: ಮುಂದುವರಿದ ತನಿಖೆ

 

ದೊಡ್ಡಬಳ್ಳಾಪುರ ತಹಶೀಲ್ದಾ‌ರ್ ಹಾಗೂ ಕೇಸ್ ವರ್ಕರ್ ಹೆಸರಿನ ನಕಲಿ ಸಹಿ ಬಳಸಿ ಮುಜರಾಯಿ ಇಲಾಖೆಯ ಲಕ್ಷ ಲಕ್ಷ ಹಣವನ್ನು ದೋಖಾ ಮಾಡಿರುವ ಆರೋಪದ ಮೇಲೆ‌ ಸಾಸಲು ಹೋಬಳಿ ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್‌ ನನ್ನು ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ಮುಜರಾಯಿ ಇಲಾಖೆ ಎಫ್‌ಡಿಎ ಕರ್ತವ್ಯದಿಂದ ಸಾಸಲು ಹೋಬಳಿ ಆರ್ ಐ ಆಗಿ ವರ್ಗಾವಣೆ ಆದ ಬಳಿಕ ಹೇಮಂತ್ ಕುಮಾರ್ ಅವರು ದಾಖಲೆಗಳನ್ನು ನೀಡುವ ವೇಳೆ ಚೆಕ್‌ ಬುಕ್ ಗಳನ್ನು ನೀಡದೆ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಳಿಕ ಹಲವು ಕಂತುಗಳಲ್ಲಿ ತಹಶಿಲ್ದಾರ್ ಅವರ ನಕಲಿ ಸಹಿ ಬಳಸಿ ಲಕ್ಷ ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ನಡೆಸಿದ್ದಾರೆ ಎನ್ನಲಾಗಿದೆ.

ಕೂಡಲೇ ಎಚ್ಚೆತ್ತ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ದಿನಾಂಕ 11-2-2025ರಂದು ದೂರು ದಾಖಲು ಮಾಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ಹಣವನ್ನು ದೋಖಾ ಮಾಡಿರುವ ಆರೋಪದ ಮೇಲೆ‌ ಸಾಸಲು ಹೋಬಳಿ ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್‌ ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ದೊಡ್ಡಬಳ್ಳಾಪುರ ತಹಶೀಲ್ದಾರ್ ಹೆಸರಿನಲ್ಲಿರುವ ಎಸ್.ಬಿ.ಐ ಬ್ಯಾಂಕ್ ದೊಡ್ಡಬಳ್ಳಾಪುರ ಮುಜರಾಯಿ ಶಾಖೆಗೆ ಸೇರಿದ ಉಳಿತಾಯ ಖಾತೆ ಸಂಖ್ಯೆಯಲ್ಲಿ ತಹಶೀಲ್ದಾರ್ ಗಮನಕ್ಕೆ ಬಾರದೆ ದಿನಾಂಕ 18/05/2023 ರಿಂದ 11/02/2025 ರವರೆಗೆ ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿರುತ್ತದೆ. ಅದರಂತೆ ಈ ವಿಚಾರವಾಗಿ ಎಸ್.ಬಿ.ಐ ಬ್ಯಾಂಕ್ ನ ವ್ಯವಸ್ಥಾಪಕರನ್ನು ಸಂಪರ್ಕಿಸಲಾಗಿ ದಾಖಲೆಗಳನ್ನು ಪಡೆದು ಪರಿಶೀಲಿಸಲಾಗಿ ಸದರಿ ಖಾತೆಯ ಚೆಕ್ ಗಳನ್ನು ಬಳಸಿಕೊಂಡು ತಹಶೀಲ್ದಾರ್ ಅವರ ಸಹಿಯನ್ನು ನಕಲು ಮಾಡಿ ಸದರಿ ಖಾತೆಯಿಂದ ಹಣವನ್ನು ಅಕ್ರಮವಾಗಿ ವಿವಿಧ ಹೆಸರಿನ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಆಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ, ಈ ವಿಷಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ದೋಖಾ ಆಗಿರುವ ಹಣವನ್ನು ಹಿಂತಿರುಗಿಸಿ ನೀಡಬೇಕೆಂದು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರು ತಿಳಿಸಿದ್ದಾರೆ.

ಸತ್ತ ಮಹಿಳೆಯ ಹೆಸರಿಗೆ ಹಣ ವರ್ಗಾವಣೆ

ನಕಲಿ ಸಹಿ ಬಳಸಿದ್ದ ಚೆಕ್ ಗಳನ್ನು ಬೆಂಗಳೂರಿನ ಮೃತಪಟ್ಟಿರುವ ಮಹಿಳೆಯೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ಆ ಮಹಿಳೆ ಕಳೆದ ಎಂಟು ತಿಂಗಳ ಹಿಂದೆಯೇ ಮೃತಪಟ್ಟಿದ್ದು, ಮೊಮ್ಮಗನ ಬಳಿ ಬ್ಯಾಂಕ್ ದಾಖಲೆ, ಮೊಬೈಲ್, ಸಿಮ್ ಪಡೆದುಕೊಂಡು ಹಂತ ಹಂತವಾಗಿ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಒಮ್ಮೆ ಹಣ ಡ್ರಾ ಮಾಡಲು ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್‌ ತನ್ನ ಪತ್ನಿಯನ್ನೇ ಬ್ಯಾಂಕ್ ಗೆ ಕಳುಹಿಸಿ ಹಣ ಡ್ರಾ ಮಾಡಿಕೊಂಡಿರುವ ದೃಶ್ಯ ಬ್ಯಾಂಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಆಕೆ ಕೂಡ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿರುವ ಮಾಹಿತಿ ಒದಗಿಬಂದಿದೆ.

ಮನೆಯಲ್ಲಿ ಸೀಲ್ ಹಾಗೂ ಚೆಕ್ ಗಳು ಪತ್ತೆ

ಪೊಲೀಸ್ ತನಿಖೆ ವೇಳೆ ಮನೆಯಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಸಿಮ್, ಸೀಲ್, ಸಹಿ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ..

ಆನ್ ಲೈನ್ ಗೇಮ್ ಗೂ ಹಣ ಬಳಕೆ

ಈತ ಈ ದೋಖಾ ಮಾಡಿದ ಹಣದಲ್ಲಿ 10 ಲಕ್ಷ ರೂ. ಕೊಟ್ಟು ಒಡವೆ ಖರೀದಿ, ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ, ಮನೆಯೊಂದನ್ನು ದುರಸ್ತಿ ಮಾಡಲು 30 ಲಕ್ಷ‌ ಖರ್ಚು ಮಾಡಿರುವುದಲ್ಲದೇ ಆನ್ ಲೈನ್ ಗೇಮ್ ಗೂ ಹಣ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!