ತನಗಾದ ಅನ್ಯಾಯ ಖಂಡಿಸಿ ನ್ಯಾಯಕ್ಕಾಗಿ ಒತ್ತಾಯಿಸಿ ಡಿಸಿ ಕಚೇರಿ ಎದುರು ಮಾಜಿ ಯೋಧ ಏಕಾಂಗಿ ಹೋರಾಟ

ರಾಜಕೀಯ ದ್ವೇಷದಿಂದ ಜಮೀನಿನಲ್ಲಿ ಬೆಳೆದ ಟೊಮೆಟೊ, ಕ್ಯಾಪ್ಸಿಕಂ ಮತ್ತು ಗುಲಾಬಿ ಬೆಳೆಯನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಮಾಜಿ ಯೋಧರೊಬ್ಬರು ಜಿಲ್ಲಾಧಿಕಾರಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ದೇವನಹಳ್ಳಿ ತಾಲೂಕಿನ ಹಾರೋಹಳ್ಳಿಯ ಹೆಚ್.ಎಂ ರಾಜಗೋಪಾಲ್ ಮಾಜಿಯೋಧ, ಬಿಎಸ್​ಎಫ್​ನಲ್ಲಿ 35 ವರ್ಷ ದೇಶ ಸೇವೆ ಸಲ್ಲಿಸಿರುವ ಅವರು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿದ್ದರು. ಜೈ ಜವಾನ್, ಜೈ ಕಿಸಾನ್ ವಾಕ್ಯದಂತೆ ಕೃಷಿಕನಾಗುವ ಕನಸ್ಸು ಕಂಡಿದ್ದರು. ಆದರೇ ತಂದೆಯಿಂದ ಬಂದ 20 ಗುಂಟೆ ಜಮೀನಿನಲ್ಲಿ ಕೃಷಿ ಮಾಡೋದು ಅಸಾಧ್ಯವಾಗಿತ್ತು. ಆದ ಕಾರಣ ಗ್ರಾಮದ ಸರ್ವೆ ನಂಬರ್ 73ರ ಸರ್ಕಾರಿ ಗೋಮಾಳದ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು.

ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಫಾರಂ 57 ಅರ್ಜಿಯನ್ನೂ ಹಾಕಿದ್ದರು. ಆದರೆ, ರಾಜಕೀಯ ದ್ವೇಷದಿಂದ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರಿ ನಿವೇಶನ ಮಾಡಿಸಲು ಮಾಜಿ ಯೋಧನ ಜಮೀನಿನ ಮೇಲೆ ಕಣ್ಣು:

ಹಾರೋಹಳ್ಳಿ ಗ್ರಾಮದ ಸರ್ವೇ ನಂಬರ್ 73ರ ಸರ್ಕಾರಿ ಗೋಮಾಳದಲ್ಲಿ ಗ್ರಾಮದ ಬಹುತೇಕ ಜನರು ಸಾಗುವಳಿ ಮಾಡುತ್ತಿದ್ದಾರೆ. ಜಮೀನು ಮಂಜೂರಿಗಾಗಿ ಫಾರಂ 57 ಅರ್ಜಿ ಹಾಕಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ರಾಜಗೋಪಾಲ್ ಜಮೀನಿನಲ್ಲೇ ನಿವೇಶನ ಮಾಡಿಸಲು ನಿರ್ಣಯ ಕೈಗೊಂಡಿದ್ದಾರೆ. ಇದೇ ನೆಪ ಮಾಡಿಕೊಂಡ ರಾಜಕೀಯ ಮುಖಂಡರು ಏಕಾಏಕಿ ಬಂದು ಜಮೀನು ತೆರವು ಮಾಡಿದ್ದಲ್ಲದೆ, ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ, ಕ್ಯಾಪ್ಸಿಕಂ ಮತ್ತು ಗುಲಾಬಿ ಬೆಳೆ ನಾಶ ಮಾಡಿದ್ದಾರೆಂದು ರಾಜಗೋಪಾಲ್ ಧರಣಿ ನಡೆಸಿದ್ದಾರೆ.

ಮಾಜಿ ಯೋಧನ ಪತ್ನಿ ಪಕ್ಷ ಬಿಟ್ಟಿದ್ದಕ್ಕೆ ಕಿರುಕುಳ :

ರಾಜಗೋಪಾಲ್ ಪತ್ನಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಸೇನೆಯಿಂದ ನಿವೃತ್ತಿಯಾದ ನಂತರ ರಾಜಕೀಯದಿಂದ ಅವರು ದೂರ ಉಳಿದಿದ್ದರು. ಇದು ರಾಜಕೀಯ ದ್ವೇಷ ಸಾಧನೆಗೆ ಕಾರಣವಾಗಿದೆ. ಗ್ರಾಮದ ರಾಘವೇಂದ್ರ, ಸೊಣ್ಣೇಗೌಡ, ಹೆಚ್.ಜಿ ಶ್ರೀನಿವಾಸ್, ಚಂದ್ರಪ್ಪ ಮುನಿಯಪ್ಪ ಎಂಬುವರು ಸರ್ಕಾರದಿಂದ ನಿವೇಶನಕ್ಕಾಗಿ ಜಮೀನು ಮಂಜೂರಾಗದೆ ಇದ್ದರೂ ದ್ವೇಷ ಸಾಧನೆಗಾಗಿ ನಮ್ಮ ಸಾಗುವಳಿ ಜಮೀನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ರಾಜಗೋಪಾಲ್ ಹೇಳಿದ್ದಾರೆ. ಅಲ್ಲದೇ ಗ್ರಾಮದ ರಾಜಕೀಯ ಮುಖಂಡರ ಪಿತೂರಿಗೆ ಬೇಸತ್ತ ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆಗೆ ಕುಳಿತಿದ್ದಾರೆ. ದೇಶ ಸೇವೆ ಮಾಡಿದ ನನಗೆ ಕೃಷಿ ಮಾಡಲು ಎರಡು ಎಕರೆ ಜಮೀನು ಮಂಜೂರು ಮಾಡಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!