ದೊಡ್ಡಬಳ್ಳಾಪುರ: ದಿನೇ ದಿನೇ ತನ್ನ ಎಲ್ಲೆ ವಿಸ್ತರಿಸಿಕೊಂಡು ರಾಜ್ಯ ರಾಜಧಾನಿಗೆ ದೊಡ್ಡಬಳ್ಳಾಪುರ ನಗರ ಹತ್ತಿರವಾಗುತ್ತಿದೆ. ಏಷ್ಯಾದ ಎರಡನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಂದಾಗಿ ಲಕ್ಷಾಂತರ ಜನರನ್ನು ಈ ನಗರವು ಆಕರ್ಷಿಸುತ್ತಿದೆ.
ದೀಪದ ಬುಡದಲ್ಲಿ ಕತ್ತಲು ಎಂಬಂತೆ ರಾಜಧಾನಿಗೆ ಕೂಗಳತೆ ದೂರದಲ್ಲೇ ಇದ್ದರೂ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಸೊರಗುತ್ತಿದೆ.
ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ, ದಾಬಸ್ ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ ನಗರ ಭಾಗದಲ್ಲಿ ಎಲ್ಲಿಯೂ ಪ್ರಯಾಣಿಕರಿಗೆ ತಂಗುದಾಣ ಇಲ್ಲದಂತಾಗಿದೆ.
ನಗರದಿಂದ ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹಿಂದೂಪುರ ಮಾರ್ಗವಾಗಿ ನಿತ್ಯ ನೂರಾರು ರಾಜ್ಯ ಹಾಗೂ ಅಂತಾರಾಜ್ಯ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಅದೇ ರೀತಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚುತ್ತಿದೆ. ಆದರೆ, ಪ್ರಯಾಣಿಕರು ಬಿಸಿಲು-ಮಳೆಗೆ ಮೈಯೊಡ್ಡಿ ಬಸ್ಸಿಗಾಗಿ ಕಾದು ಕಾದು ನಿತ್ರಾಣರಾಗುವ ಸ್ಥಿತಿ ನಿರ್ಮಾಣವಾಗಿದೆ.
ರೈಲ್ವೆ ನಿಲ್ದಾಣ, ಟಿ.ಬಿ.ವೃತ್ತದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ತಂಗುದಾಣ ಇದ್ದರೂ ಪ್ರಯಾಣಿಕರು ಬಳಸುವಂತೆ ಇಲ್ಲ.
ನಗರದಲದಲಿರುವ ತಾಲೂಕು ಕಚೇರಿ, ಆಸ್ಪತ್ರೆ, ಬ್ಯಾಂಕ್, ಕೋರ್ಟ್, ಶಾಲಾ- ಕಾಲೇಜು, ಉಪವಿಭಾಗಾಧಿಕಾರಿ ಕಚೇರಿ, ಕಾರ್ಖಾನೆ ಕೆಲಸಗಳಿಗೆ ಬಂದು ಹೋಗುವ ಪ್ರಯಾಣಿಕರು ರಸ್ತೆ ಇಕ್ಕೆಲಗಳಲ್ಲಿ ನಿಂತು ನರಕಯಾತನೆ ಅನುಭವಿಸಬೇಕಾಗಿದೆ.
ಬಸ್ಸಿಗಾಗಿ ಕಾಯುವ ಪ್ರಯಾಣಿಕರಲ್ಲಿ ಅಂಗವಿಕಲರು, ಮಕ್ಕಳು, ವೃದ್ಧರು, ಮಹಿಳೆಯರು, ರೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಬಿಸಿಲಲ್ಲೇ ನಿಲ್ಲಬೇಕಾಗಿದೆ.
ನಗರದಲ್ಲಿ ತಂಗುದಾಣ ಇಲ್ಲದೇ ಇರುವ ಕಾರಣ ಕೆಲ ಬಸ್ ಗಳು ನಿಲುಗಡೆ ಮಾಡದೇ ಹೋರಟು ಹೋಗುತ್ತವೆ. ಆಗ ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ಕುಳಿತ ಪ್ರಯಾಣಿಕರು ಮತ್ತೆ ರಸ್ತೆಯಲ್ಲೇ ಇನ್ನಷ್ಟು ಸಮಯ ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಯಾಣಿಕರು ರಸ್ತೆಯಲ್ಲೇ ಬಸ್ಸಿಗೆ ನಿಲ್ಲುತ್ತಿರುವುದರಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಿವೆ.
ನಗರದ ಅಭಿವೃದ್ಧಿಗೆ ಕೋಟ್ಯಂತರ ರೂ.ಖರ್ಚು ಮಾಡುವ ಜನಪ್ರತಿನಿಧಿಗಳು, ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳಿಗೆ ತಂಗುದಾಣ ನಿರ್ಮಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲದಿರುವುದು ದೊಡ್ಡಬಳ್ಳಾಪುರದ ಜನರ ದೌರ್ಭಾಗ್ಯವೇ ಸರಿ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಸೂಕ್ತ ಹಾಗೂ ಪ್ರಯಾಣಿಕ ಸ್ನೇಹಿ ತಂಗುದಾಣ ನಿರ್ಮಿಸಬೇಕೆಂಬುದು ಜನರ ಒಕ್ಕೊರಲ ಆಗ್ರಹವಾಗಿದೆ.