
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರದೇಶದ ವ್ಯಾಪ್ತಿಯಲ್ಲಿ ಥರ್ಮಕೋಲ್, ಪ್ಲಾಸ್ಟಿಕ್ ಮತ್ತು ಮೈಕ್ರೋ ಬೀಡ್ಸ್‌ನಿಂದ ತಯಾರಾದ ಪ್ಲಾಸ್ಟಿಕ್ ವಸ್ತುಗಳ ಕೊಂಡೊಯ್ಯುವಿಕೆ, ಬಳಕೆ ಮತ್ತು ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಆದೇಶ ಮಾಡಿದ್ದರು.
ಘಾಟಿ ಕ್ಷೇತ್ರದಲ್ಲಿರುವ ಸಸ್ಯ ಸಂಕುಲ, ಪ್ರಾಣಿ-ಪಕ್ಷಿ, ಸೂಕ್ಷ್ಮಜೀವಿಗಳು, ಮಾನವ ಸಂಕುಲ ಸಂರಕ್ಷಿಸುವ ಹಾಗೂ ಇಲ್ಲಿನ ಪ್ರಾಕೃತಿಕ ಸೊಬಗಿನ ನೈರ್ಮಲ್ಯತೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶ ಪಾಲಿಸಲು ಘಾಟಿ ಗ್ರಾಮ ಪಂಚಾಯಿತಿಯಿಂದ ಪ್ಲಾಸ್ಟಿಕ್ ತಪಾಸಣೆ ಚೆಕ್ ಪೋಸ್ಟ್ ನಿರ್ಮಿಸುವಂತೆ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತ ಸೂಚನಾ ಫಲಕ ಅಳವಡಿಸುವಂತೆ ಸೂಚಿಸಲಾಗಿದೆ. ಏಕ ಬಳಕೆಯ ಪ್ಲಾಸ್ಟಿಕ್ ಸಾಮಗ್ರಿಗಳನ್ನು ತಪಾಸಣೆ ನಡೆಸಿ, ನಿರ್ಬಂಧಿಸುವಂತೆ ತಿಳಿಸಿದ್ದಾರೆ.

ಆದರೆ, ಡಿಸಿ ಆದೇಶವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ವಸ್ತುಗಳನ್ನು ಎಗ್ಗಿಲ್ಲದೇ ಮಾರಾಟ ಹಾಗೂ ಬಳಕೆ ಮಾಡಲಾಗುತ್ತಿದೆ. ಶೇ.10ರಷ್ಟು ಮಾತ್ರ ಡಿಸಿ ಆದೇಶದ ನಂತರ ಪ್ಲಾಸ್ಟಿಕ್ ನಿಷೇಧವಾಗಿದೆ. ದೇವಸ್ಥಾನಕ್ಕೆ ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ತರಲಾಗುತ್ತಿದೆ. ದೇವಾಲಯದ ಹೊರಭಾಗದಲ್ಲಿರುವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಹಾಗೂ ಬಳಕೆ ಮಾಡಲಾಗುತ್ತಿದೆ.
ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಿಯೂ ಪ್ಲಾಸ್ಟಿಕ್ ತಪಾಸಣೆ ಚೆಕ್ ಪೋಸ್ಟ್ ನಿರ್ಮಾಣ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತ ಸೂಚನಾ ಫಲಕ ಅಳವಡಿಸಿಲ್ಲ.
ಇನ್ನೂ ಮುಂದೆಯಾದರೂ ಘಾಟಿ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ, ಮಾರಾಟಕ್ಕೆ ಕಡಿವಾಣ ಬೀಳುತ್ತಾ ಕಾದು ನೋಡಬೇಕಿದೆ…