ಡಾ. ಬಾಬು ಜಗಜೀವನರಾಂ ಅವರು ಯಾವುದೇ ವರ್ಗಕ್ಕೆ ಸೀಮಿತವಾಗದೆ ಎಲ್ಲರ ಏಳಿಗೆಗೆ ಶ್ರಮಿಸಿದವರು: ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್

 

ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರು ಸ್ವಾತಂತ್ರ್ಯ ಹೋರಾಟಗಾರಾಗಿ, ಹಸಿರು ಕ್ರಾಂತಿಯ ಹರಿಕಾರರಾಗಿ, ಕೇಂದ್ರದ ಮಂತ್ರಿಗಳಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಯಾವುದೇ ವರ್ಗಕ್ಕೆ ಸೀಮಿತವಾಗದೆ ಎಲ್ಲರ ಏಳಿಗೆಗಾಗಿ ಶ್ರಮಿಸಿದ್ದಾರೆ. ಅಂತಹ ಮಹಾನ್ ನಾಯಕರ ಆದರ್ಶ ಮತ್ತು ಚಿಂತನೆಗಳನ್ನು ಪಾಲಿಸೋಣ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ಹೇಳಿದರು.

ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಡಾ.ಬಾಬು ಜಗಜೀವನರಾಂ ಅವರ 37ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಡಾ.ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ‌.ಶಿವಶಂಕರ.ಎನ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.

ಡಾ.ಜಗಜೀವನ ರಾಂ ಕಿರಿಯ ವಯಸ್ಸಿನಲ್ಲೇ ಕೇಂದ್ರ ಮಂತ್ರಿಯಾಗಿ ದೇಶದ ಸೇವೆಯಲ್ಲಿ ತೊಡಗಿಕೊಂಡಿದ್ದರು‌. ಕಾರ್ಮಿಕ ಚಳುವಳಿ, ಸಂವಿಧಾನ ರಚನೆಯಲ್ಲೂ ಅವರ ಕೊಡುಗೆ ಇದೆ. ರಕ್ಷಣಾ ಮಂತ್ರಿಗಳಾಗಿ, ಕಾರ್ಮಿಕ ಮಂತ್ರಿಗಳಾಗಿ, ಕೃಷಿ ಮಂತ್ರಿಗಳಾಗಿ ದೇಶ ಸೇವೆ ಸಲ್ಲಿಸಿದ್ದಾರೆ. ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಬಣ್ಣಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕಿ ಪ್ರೇಮ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು, ಸಮುದಾಯದ ಮುಂಖಂಡರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಯವರ ಕಚೇರಿ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *