ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿ ರೈತರಿಗೆ ಒಳ್ಳೆ ಆದಾಯ ತಂದುಕೊಟ್ಟಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಆಶಯ ವ್ಯಕ್ತಪಡಿಸಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಜಿ.ಹನುಮಂತರಾಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ, ಹಾಡೋನಹಳ್ಳಿ ಇವರ ವತಿಯಿಂದ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ 95ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ತಂತ್ರಜ್ಞಾನ ದಿನವನ್ನು ಆಯೋಜಿಸಿ ಟೊಮೆಟೊ ಬೆಳೆಯಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ತೋಟಗಾರಿಕೆ ಇಲಾಖಾ ಉಪನಿರ್ದೇಶಕ ಜೆ. ಗುಣವಂತ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಉತ್ತಮ ಇಳುವರಿ ಪಡೆಯುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕಾ ಇಲಾಖೆಯ ವತಿಯಿಂದ ದೊರಕುವ ಎಲ್ಲಾ ಸವಲತ್ತುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹಿರಿಯ ವಿಜ್ಞಾನಿ ಡಾ. ಬಿ.ಜಿ. ಹನುಮಂತರಾಯರ ಅವರು ಟೊಮೆಟೊ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು. ಡಾ. ವೀರನಾಗಪ್ಪ, ಪಿ.ರವರು ಟೊಮೆಟೊ ಬೆಳೆಯ ಪೋಷಕಾಂಶ ನಿರ್ವಹಣೆ ಬಗ್ಗೆ ವಿವರಿಸಿದರು. ಡಾ. ದರ್ಶಿನಿ, ಜಿ.ಎಂ., ವಿಜ್ಞಾನಿ (ಸಸ್ಯ ಸಂರಕ್ಷಣೆ),ರವರು ಟೊಮೆಟೊ ಬೆಳೆಯಲ್ಲಿ ಕಂಡು ಬರುವ ಕೀಟ ಮತ್ತು ರೋಗ ಲಕ್ಷಣಗಳನ್ನು ಗುರುತಿಸುವಿಕೆ ಮತ್ತು ನಿರ್ವಹಣೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಪ್ರಸ್ತುತ ಟೊಮೆಟೊ ಬೆಳೆಯನ್ನು ಹೆಚ್ಚಾಗಿ ಬಾಧಿಸುತ್ತಿರುವ ಎಲೆಮುಟುರು ನಂಜುರೋಗ ಮತ್ತು ಬಿಳಿನೊಣ ಬಾಧೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಸಮಗ್ರ ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ವಿವರಿಸಲಾಯಿತು.
ತರಬೇತಿಯಲ್ಲಿ ಟೊಮೆಟೊ ಬೆಳೆಯಲ್ಲಿ ಕಂಡು ಬರುವ ವಿವಿಧ ಕೀಟ ಮತ್ತು ರೋಗ ಬಾಧಿತ ಮಾದರಿಯನ್ನು ಪ್ರದರ್ಶಿಸಲಾಯಿತು.