ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ನ ಪುರುಷರ ಡಬಲ್ಸ್‌ನಲ್ಲಿ, ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. ಈ ಗೆಲುವಿನೊಂದಿಗೆ ATP ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬೋಪಣ್ಣ ಪಾಲಾಗಿದೆ.
ಮೂಲತಃ ಕೊಡಗಿನವರಾದ ರೋಹನ್ ಬೋಪಣ್ಣ ತಮ್ಮ 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಮೂಲತಃ ಕೊಡಗಿನ ಮಾದಪುರ ಗ್ರಾಮದ ನಿವಾಸಿಯಾದ ಮಚ್ಚಂಡ ಭೂಪಣ್ಣ ಹಾಗೂ ಮಲ್ಲಿಕಾ ದಂಪತಿಯ ಪುತ್ರನಾಗಿದ್ದಾರೆ.
ಇದಕ್ಕೂ ಮುನ್ನ ಎಟಿಪಿ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಯುಎಸ್ಎ ಆಟಗಾರ ಆಸ್ಟಿನ್ ಕ್ರಾಜಿಸೆಕ್ ಅಗ್ರಸ್ಥಾನದಲ್ಲಿದ್ದರು. ಆದರೆ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಕ್ರಾಜಿಸೆಕ್ ಮತ್ತು ಅವರ ಕ್ರೊಯೇಷಿಯಾದ ಜೊತೆಗಾರ ಇವಾನ್ ಡೋಡಿಗ್ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ. ಇತ್ತ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಸೆಮಿಫೈನಲ್ಗೇರುವ ಮೂಲಕ ರೋಹನ್ ಬೋಪಣ್ಣ ಟೆನಿಸ್ (ಡಬಲ್ಸ್) ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ ಭಾರತದ ನಾಲ್ಕನೇ ಟೆನಿಸ್ ತಾರೆ ಎಂಬ ಹೆಗ್ಗಳಿಕೆಗೂ ರೋಹನ್ ಬೋಪಣ್ಣ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಹೇಶ್ ಭೂಪತಿ, ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಝಾ ಡಬಲ್ಸ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದರು.
ಇದೀಗ ತಮ್ಮ ಹಿರಿಯ ವಯಸ್ಸಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ರೋಹನ್ ಬೋಪಣ್ಣ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.