
ದೊಡ್ಡಬಳ್ಳಾಪುರದ ಜನತೆ ಹೊಸ ವರ್ಷವನ್ನು ಸಂಭ್ರಮದಿಂದಲೇ ಆಚರಿಸಲು ಫುಲ್ ಸಜ್ಜಾಗಿದ್ದಾರೆ. ಯುವಕರು, ಮಕ್ಕಳು, ಮಹಿಳೆಯರು ತಮ್ಮ ವಯೋಮಾನದ ಗುಂಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿಕೊಂಡು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಅದೇರೀತಿ ಅಲ್ಲಲ್ಲಿ ಸಣ್ಣ ಪುಟ್ಟ ಪಾರ್ಟಿಗಳನ್ನು ಮಾಡಲು ಯುವ ಜನತೆ ಮುಂದಾಗಿದ್ದಾರೆ.
ಕೇಕ್ ಭರಾಟೆ ಜೋರು:
ಹೊಸ ವರ್ಷಾಚರಣೆ ಹಿನ್ನೆಲೆ ನಗರದ ಎಲ್ಲಾ ಬೇಕರಿಗಳಲ್ಲಿ ಕೇಕ್ ಮಾರಾಟ ಭರಾಟೆ ಜೋರಾಗಿದೆ. ಕುಟುಂಬ ಸದಸ್ಯರು, ಸ್ನೇಹಿತರು ಯೋಜನೆ ರೂಪಿಸಿದಂತೆ ಬೇಕರಿಗಳಿಗೆ ಮೊದಲೇ ವಿವಿಧ ಬಗೆಯ ಕೇಕ್‌ಗಳ ಸಿದ್ಧಪಡಿಸಲು ಬೇಡಿಕೆ ಸಲ್ಲಿಸಿದ್ದರು. ಅಂತೆಯೇ ಇಂದು ಮಧ್ಯಾಹ್ನದಿಂದಲೇ ಕೇಕ್ ಖರೀದಿಗೆ ಜನ ಮುಗಿಬಿದ್ದಿದ್ದರು.
ಬೇಕರಿಗಳು ಹೊಸ ವರ್ಷಾಚರಣೆಗೆ ಸಿಂಗಾರಗೊಂಡಿದ್ದವು. ಬಣ್ಣ ಬಣ್ಣದ ಬಲೂನು, ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ಗ್ರಾಹಕರನ್ನು ಕೈಬಿಸಿ ಕರೆಯುತ್ತಿವೆ.
ಎಗ್‌ಲೆಸ್ ಕೇಕ್, ಪೈನಾಪಲ್, ಸ್ಟ್ರಾಬೆರಿ ಪೇಸ್ಟ್ರೀ, ಕಪ್ ಕೇಕ್‌ಗಳಿಗೂ ಈ ಬಾರಿ ಬೇಡಿಕೆ ಇದ್ದು, ಕೆಲವರು ಬ್ಲ್ಯಾಕ್ ಫಾರೆಸ್ಟ್, ಐರಿಶ್ ಕಾಫಿಯಂತಹ ದುಬಾರಿ ಕೇಕ್ ಖರೀದಿಗೂ ಮುಂದಾಗಿದ್ದರು.
ಪ್ರತಿ ಕೆಜಿಗೆ ಕೇಕ್‌ಗೆ 250 ರಿಂದ 500 ದರವಿದ್ದು, ಕೇಕ್ ಮಾತ್ರವಲ್ಲದೆ, ಹೊಸ ವರ್ಷ ಶುಭಾಶಯ ಕೋರುವ ಸ್ಟಿಕರ್, ಗ್ರಿಟಿಂಗ್ಸ್‌ಗಳ ಖರೀದಿಯಲ್ಲಿ ಜನ ಮಗ್ನರಾಗಿದ್ದರು.
ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷಾಚರಣೆ ವೇಳೆ ಕೇಕ್ ವ್ಯಾಪಾರ ಭರ್ಜರಿಯಾಗಿದೆ ಎನ್ನುತ್ತಾರೆ ಬೇಕರಿ ಮಾಲೀಕರು.
