ಟರ್ಕಿಯಲ್ಲಿ ಭೀಕರ ಭೂಕಂಪ; ಜನರ ಜೀವ ರಕ್ಷಣೆಗೆ ತೆರಳಿದ NDRF ತಂಡ

ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ ಸಮೀಪ 17.9 ಕಿ.ಮೀ. ಆಳದಲ್ಲಿ ಸೋಮವಾರ ಮುಂಜಾನೆ 4.17ರ ಹೊತ್ತಿಗೆ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ. ನೆರೆಯ ದೇಶ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ. ಮಧ್ಯಪ್ರಾಚ್ಯ ದೇಶಗಳಾದ ಲೆಬನಾನ್‌, ಸೈಪ್ರಸ್‌, ಇಸ್ರೇಲ್ ಹಾಗೂ ಈಜಿಪ್ಟ್‌ನಲ್ಲಿಯೂ ಭೂಮಿ ಕಂಪಿಸಿತ್ತು.

ಈವರೆಗೆ 120ಕ್ಕೂ ಹೆಚ್ಚು ಸಲ ಭೂಮಿ ಕಂಪಿಸಿರುವುದು ವರದಿಯಾಗಿದೆ.

ದುರಂತದಲ್ಲಿ ಇದುವರೆಗೆ ಸುಮಾರು 4,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 20 ಸಾವಿರಕ್ಕೂ ಹೆಚ್ಚು‌ ಜನ ಗಾಯಗೊಂಡಿದ್ದಾರೆ. ಟರ್ಕಿಯಲ್ಲಿ ಈವರೆಗೆ ಸುಮಾರು 3 ಸಾವಿರ ಮಂದಿ ಹಾಗೂ ಸಿರಿಯಾದಲ್ಲಿ 1,500 ಜನರು ಮೃತಪಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಟರ್ಕಿಯಲ್ಲಿ ಭೀಕರ ಭೂಕಂಪದಿಂದ ಸಾವಿರಾರು ಜನ ಸಾವನ್ನಪ್ಪಿರುವುದು ದುಃಖದ ಸಂಗತಿ. ಟರ್ಕಿಯ ಈ ಕ್ಲಿಷ್ಟ ಪರಿಸ್ಥಿತಿಯ ನಿರ್ವಹಣೆ ಹಾಗೂ ಜನರ ಜೀವದ ರಕ್ಷಣೆಗೆ ಸಹಾಯಕವಾಗಲು ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (NDRF)ದ ಸಿಬ್ಬಂದಿ ಹಾಗೂ ಶ್ವಾನದಳವನ್ನು ಹೊತ್ತ ವಾಯುಸೇನೆಯ C-17 ವಿಮಾನ ಸೋಮವಾರ ರಾತ್ರಿ ಟರ್ಕಿಗೆ ತೆರಳಿದೆ.

ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಿರಿಯಾ ಹಾಗೂ ಟರ್ಕಿಯ ಗಡಿ ಭಾಗ ಸ್ಮಶಾನಸದೃಶದಂತೆ ಗೋಚರಿಸುತ್ತಿದೆ. ಪ್ರಬಲ ಭೂಕಂಪ‌ ಸಂಭವಿಸಿ ಹಲವು ಗಂಟೆಗಳು ಕಳೆದರೂ ಲಘು ಕಂಪನಗಳು ಸಂಭವಿಸುತ್ತಲೇ ಇವೆ. ಕಟ್ಟಡಗಳು ಕುಸಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

Leave a Reply

Your email address will not be published. Required fields are marked *