ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮುಕ್ತಾಯವಾಗಿದ್ದು ಜ.5 ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಮತದಾರರ ನೋಂದಣಿ ಅಧಿಕಾರಿ ಎನ್.ತೇಜಸ್ ಕುಮಾರ್ ಹೇಳಿದರು.
ಅವರು ಈ ಬಗ್ಗೆ ಮಾಹಿತಿ ನೀಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ನ.9 ರಿಂದ ಡಿ.8 ರವರೆಗೆ ಮತದಾರರಿಂದ ಬಂದಿದ್ದ ಆಕ್ಷೇಪಣೆಗಳನ್ನು ಸ್ವೀಕರಿಸಿ, ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗಳಿಗು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡಿ.9 ರಿಂದ 26 ರವರಿಗೆ ಮತದಾರರಿಂದ ಬಂದಿದ್ದ ಎಲ್ಲಾ ಆಕ್ಷೇಪಣೆಗಳನ್ನು ಸರಿಪಡಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿಗು ಮತಗಟ್ಟೆ ವ್ಯಾಪ್ತಿಯಲ್ಲಿನ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಮತದಾರರಿಂದಲು ಸಹ ಅಭಿಪ್ರಾಯಗಳನ್ನು ಪಡೆದಿದ್ದಾರೆ.
ಕುಟುಂಬದ ಸದಸ್ಯರು ಮರಣ ಹೊಂದಿರುವಂತಹ ಸಂದರ್ಭಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಯುವಂತೆ ಜನರೇ ಸ್ವಯಂ ಪ್ರೇರಣಿಯಿಂದ ಸೂಕ್ತ ದಾಖಲಾತಿಗಳನ್ನು ನೀಡಿ ಹೆಸರುಗಳನ್ನು ತೆಗೆಸಿದ್ದಾರೆ. ಇದರಿಂದ ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರ ಹೆಸರುಗಳು ಹಾಗೆಯೇ ಉಳಿಯುವುದು ತಪ್ಪಿದೆ ಎಂದರು.
ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿನ 1,137 ಮತಗಟ್ಟೆಗಳ ಮತದಾರರಿಂದ ಈಗಾಗಲೇ ಬಂದಿರುವ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಶುದ್ದೀಕರಿಸಲಾಗಿದೆ. ಜ.5 ರಂದು ನೋಂದಾಯಿತ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ ಮತದಾರರ ಪಟ್ಟಿಯನ್ನು ಉಚಿತವಾಗಿ ನೀಡಲಾಗುವುದು.
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಹೆಸರು ಸೇರ್ಪಡೆಮಾಡುವುದು ಸೇರಿದಂತೆ ಯಾವುದೇ ರೀತಿಯ ತಿದ್ದುಪಡಿಗಳು ಇದ್ದರೆ ಚುನಾವಣ ದಿನಾಂಕ ಘೋಷಣೆಯಾದ ನಂತರ ನಾಮಪತ್ರ ಸಲ್ಲಿಕೆಯ ಅಂತಿನ ದಿನದವರೆಗೂ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರಲಿದೆ ಎಂದರು.
ಮತದರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮೊದಲುಗೊಂಡು ಎಲ್ಲಾ ತಾಲ್ಲೂಕು ಕಚೇರಿಗಳು ಹಾಗೂ ಪ್ರತಿ ಮತಗಟ್ಟೆಗಳಲ್ಲೂ ಮತದಾರರ ಅಂತಿಮ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು. ಅಲ್ಲದೆ ಆನ್ ಲೈನ್ನಲ್ಲೂ ಸಹ ಮತದಾರರು ತಮ್ಮ ಹೆಸರುಗಳು ಪಟ್ಟಿಯಲ್ಲಿ ಇರುವ ಬಗ್ಗೆ ಪರಿಶೀಲನೆ ನಡೆಸಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾ ವಿಭಾಗದ ತಹಶೀಲ್ದಾರ್ ಬಸವರಾಜ್ ತೆನ್ನಹಳ್ಳಿ, ಚುನಾವಣ ಶಾಖೆಯ ರಘುನಂದನ್ ಇದ್ದರು.