ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ ನೆರಳಿನಲ್ಲಿ ಇದ್ದ ತಳ್ಳುಗಾಡಿಯ ಇಸ್ತ್ರಿ ಮಾಡುವ ವ್ಯಕ್ತಿಗೆ ಕೊಟ್ಟು ಆತ ತದೇಕ ಚಿತ್ತದಿಂದ, ಸಂಪೂರ್ಣ ಏಕಾಗ್ರತೆಯಿಂದ ಬಟ್ಟೆಯ ಪ್ರತಿ ಸುಕ್ಕುಗಳನ್ನು ತುಂಬಾ ಶ್ರದ್ಧೆಯಿಂದ ಐರನ್ ಮಾಡುವುದನ್ನು ಹಾಗೇ ನೋಡುತ್ತಾ ನಿಂತ ನನಗೆ, ಸಿನಿಮಾ ಶೈಲಿಯ ರೀತಿ ಸುರುಳಿ ಸುರುಳಿಯಾಗಿ ನೆನಪುಗಳ ಬುತ್ತಿ ಬಿಚ್ಚಿಕೊಳ್ಳತೊಡಗಿ ನನ್ನನ್ನು 40 ವರ್ಷಗಳ ಹಿಂದಕ್ಕೆ ಕರೆದೊಯ್ಯಿತು……………..………..,,,
ನನ್ನಪ್ಪ ಕೂಡ ಬಟ್ಟೆಗಳನ್ನು ಒಗೆಯುವ ಮತ್ತು ಇಸ್ತ್ರಿ ಮಾಡುವ ಕೆಲಸ ಮಾಡುತ್ತಿದ್ದರು. ಊರ ಬೀದಿಯ ಆಲದ ಮರದ ಕೆಳಗೆ ಒಂದು ಮರದ ಉದ್ದದ ಹಲಗೆಯ ಮೇಲೆ ತುಂಬಾ ತೂಕದ ಕಬ್ಬಿಣದ ಒಂದು ಇಸ್ತ್ರಿ ಪೆಟ್ಟಿಗೆ ಇಟ್ಟುಕೊಂಡಿದ್ದರು. ಪಕ್ಕದಲ್ಲೇ ಇದ್ದಿಲು ಹಾಕುವ ಒಂದು ಒಲೆ.
ತಲೆಗೆ ಟವಲು ಸುತ್ತಿದ ಪಟಾಪಟಿ ಚೆಡ್ಡಿಯ ಹರಕಲು ಬನಿಯನ್ನಿನ, ಕೆದರಿದ ತಲೆಯ, ಕುರುಚಲು ಗಡ್ಡದ, ಕಪ್ಪುಬಣ್ಣದ ಸಾಧಾರಣ ಎತ್ತರದ ಬಲಿಷ್ಠ ತೋಳುಗಳ ಹಳ್ಳಿ ಹೈದ ನಮ್ಮಪ್ಪ.
ಮಾತು ಅತ್ಯಂತ ಮಿತ. ಎಲ್ಲವನ್ನೂ ತಲೆ ಅಲ್ಲಾಡಿಸಿ ಅ… ಹು… ಆಯ್ತು…..ನಮಸ್ಕಾರ….. ಇಷ್ಟೇ ಮಾತುಗಳು.
ವರ್ಷದ 365 ದಿನ ಕೂಡ ಬೆಳಗ್ಗೆ 5 ಗಂಟೆಗೆ ಏಳುತ್ತಿದ್ದ ಅಪ್ಪ ಊರಿನ ಕೆಲವು ಶ್ರೀಮಂತರ ಮನೆ ಮನೆಗೆ ಹೋಗಿ ಅವರು ಕೊಡುತ್ತಿದ್ದ ಬಟ್ಟೆಗಳನ್ನು ಸೈಕಲ್ಲಿನ ಮೇಲೆ ಇಟ್ಟುಕೊಂಡು ಅದನ್ನು ತಳ್ಳುತ್ತಾ ಊರ ಹೊರಗಿನ ಕೆರೆಯ ಬಳಿ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿಯೇ ಶಾಶ್ವತವಾಗಿ ಇಟ್ಟಿರುತ್ತಿದ್ದ ಕಬ್ಬಿಣದ ಒಂದು ದೊಡ್ಡ ತಪ್ಪಲೆಗೆ ಅವುಗಳನ್ನು ಸುರಿಯುತ್ತಿದ್ದರು. ಬೇರೆ ಬೇರೆ ಮನೆಯವರ ಕಟ್ಟುಗಳನ್ನು ವಿಂಗಡಿಸಿ ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ ನೆನಸುತ್ತಿದ್ದರು. ಇದೇ ಸಂದರ್ಭದಲ್ಲಿ ಕೆಲವು ಬಟ್ಟೆಯ ಬಣ್ಣಗಳು ಇತರ ಬಟ್ಟೆಗಳಿಗೆ ತಾಗುವ ಸಾಧ್ಯತೆ ಇರುವುದರಿಂದ ಅದನ್ನು ಎಚ್ಚರಿಕೆಯಿಂದ ಬೇರೆ ಮಾಡುತ್ತಿದ್ದರು.
ಅನಂತರ ಒದ್ದೆಯಾದ ಒಂದೊಂದೆ ಬಟ್ಟೆಯನ್ನು ತೆಗೆದು ಅಲ್ಲಿ ಇದ್ದ ದಪ್ಪ ಕಲ್ಲಿನ ಮೇಲೆ ಇಟ್ಟು ಕುಕ್ಕರಗಾಲಿನಲ್ಲಿ ಕುಳಿತು ಸೋಪು ಹಚ್ಚಿ ಒಗೆಯುತ್ತಿದ್ದರು. ಕತ್ತೆತ್ತಿಯೂ ನೋಡದೆ ಒಂದೇ ಸಮನೆ ಕೆಲಸ ಮಾಡುತ್ತಿದ್ದರು. ಆಗಾಗ ತಮ್ಮ ಬಳಿ ಸದಾ ಇರುತ್ತಿದ್ದ ಸಣ್ಣ ಚೀಲದಲ್ಲಿ ಎಲೆ ಅಡಿಕೆ ಸುಣ್ಣವನ್ನು ಬಾಯಿಗೆ ಹಾಕಿಕೊಂಡು ಒಂದೆರಡು ನಿಮಿಷಗಳ ವಿರಾಮ ಪಡೆಯುತ್ತಿದ್ದರು.
ಸುಮಾರು 10 ಗಂಟೆಯ ಹೊತ್ತಿಗೆ ಅಮ್ಮ ಮತ್ತು ಸ್ವಲ್ಪ ದೊಡ್ಡವನಾದ ಮೇಲೆ ನಾನು ಅಪ್ಪನಿಗೆ ಊಟದ ಬುತ್ತಿಯನ್ನು ತೆಗೆದುಕೊಂಡು ಅವರಿದ್ದಲ್ಲಿಗೆ ಹೋಗುತ್ತಿದ್ದೆವು. ಬೆಳಗಿನ ಊಟವೆಂದರೆ ಈಗಿನಂತೆ ಇಡ್ಲಿ ವಡೆ ದೋಸೆ ಚಪಾತಿ ಚಿತ್ರಾನ್ನ ಪಲಾವ್ ಉಪ್ಪಿಟ್ಟು ಮುಂತಾದ ತಿಂಡಿ ಅಲ್ಲ. ರಾಗಿ ಮುದ್ದೆ ಉಪ್ಪು ಸಾರು/ಸೊಪ್ಪಿನ ಸಾರು ಮಾತ್ರ. ಅನ್ನ ಕೂಡ ಇರುತ್ತಿರಲಿಲ್ಲ. ಕೆಲವೇ ಹಬ್ಬದ ದಿನಗಳಲ್ಲಿ ಮಾತ್ರ ಅನ್ನ ಪಾಯಸ ಮತ್ತು ವಡೆ ಮಾಡುತ್ತಿದ್ದರು. ಆಗಲೂ ಅಪ್ಪ ತಲೆ ಬಗ್ಗಿಸಿ ಊಟ ಮಾಡುತ್ತಿದ್ದರೆ ಹೊರತು ಒಂದು ಮಾತೂ ಆಡುತ್ತಿರಲಿಲ್ಲ. ನಾನು ಮಾತ್ರ ಅಲ್ಲಿನ ಕೆರೆಯ ನೀರಿನಲ್ಲಿ ಮನಸ್ಸೋ ಇಚ್ಛೆ ಆಡುತ್ತಿದ್ದೆ. ಮನೆಗೆ ವಾಪಸ್ಸು ಬರುವಾಗ ಅಪ್ಪ ಕೊಡುತ್ತಿದ್ದ ಐದು ಪೈಸೆಗೆ ಪೆಪ್ಪರ್ ಮೆಂಟ್ ಅಥವಾ ಮಿಠಾಯಿ ಕೊಂಡು ದಾರಿಯಲ್ಲಿ ತಿನ್ನುತ್ತಾ ಅಮ್ಮನ ಕೈಹಿಡಿದು ಬರುತ್ತಿದ್ದೆ.
ಬಟ್ಟೆಗಳನ್ನು ಒಗೆದು ಅವು ಒಣಗಿದ ಮೇಲೆ ಎಲ್ಲವನ್ನೂ ಹೊತ್ತು ಸುಮಾರು 3 ಗಂಟೆಯ ಹೊತ್ತಿಗೆ ಅಪ್ಪ ತಮ್ಮ ಎಂದಿನ ಸ್ಥಳ ಆಲದ ಮರದ ಕೆಳಗೆ ಬರುತ್ತಿದ್ದರು.
ಒಣಗಿದ ಬಟ್ಟೆಗಳನ್ನು ಒಂದೊಂದಾಗಿ ಬೇರ್ಪಡಿಸಿ ಬೇಗ ಕೊಡಬೇಕಾಗಿರುವವರ ಬಟ್ಟೆಗಳನ್ನು ಆದ್ಯತೆಯ ಮೇರೆಗೆ ಇಸ್ತ್ರಿ ಮಾಡುತ್ತಿದ್ದರು. ಅಪ್ಪನ ನಿಷ್ಠೆ ಪ್ರಾಮಾಣಿಕತೆ ಶ್ರದ್ಧೆ ಮತ್ತು ಏಕಾಗ್ರತೆ ಎಷ್ಟಿತ್ತೆಂದರೆ ತನ್ನ ಜೀವಮಾನದಲ್ಲಿ ಈ ಕೆಲಸ ಮಾಡುವವರೆಗೆ ಒಂದು ಬಟ್ಟೆಯನ್ನು ನಿರ್ಲಕ್ಷ್ಯದಿಂದ ಸುಡಲಿಲ್ಲ ಅಥವಾ ಬೇರೆಯವರಿಂದ ಬೈಗುಳ ಪಡೆಯಲಿಲ್ಲ. ಶಿಸ್ತು ಮತ್ತು ಶ್ರಮ ಅಪ್ಪನ ಉಸಿರಾಗಿತ್ತು. ಇದನ್ನು ಇತರರು ನಂಬುವುದು ಕಷ್ಟ. ಅಪ್ಪ ಅಪರೂಪಕ್ಕೆ ಮೈಗೆ ಹುಷಾರಿಲ್ಲದಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಪಡೆದು ಯಾವುದೇ ವಿರಾಮ ಪಡೆಯದೆ ಕೆಲಸ ಮಾಡುತ್ತಿದ್ದರು.
ಸಂಜೆ ಅವಶ್ಯಕತೆ ಇರುವವರಿಗೆ ಬಟ್ಟೆಗಳನ್ನು ಕೊಟ್ಟು ಮನೆಗೆ ಬರುವಷ್ಟರಲ್ಲಿ 8 ಗಂಟೆಯಾಗುತ್ತಿತ್ತು. ಆಗೆಲ್ಲಾ ಸಾಮಾನ್ಯವಾಗಿ ರೈತರು ಶ್ರಮಜೀವಿಗಳು ಮಧ್ಯಾಹ್ನ ಊಟ ಮಾಡುತ್ತಿರಲಿಲ್ಲ.’ರಾತ್ರಿ ಅಪ್ಪ ಅಮ್ಮ ಅಜ್ಜ ಅಜ್ಜಿ ನಾನು ಎಲ್ಲರೂ ಒಟ್ಟಿಗೆ ಕುಳಿತು ಸೀಮೆಎಣ್ಣೆ ಬುಡ್ಡಿಯ ಬೆಳಕಿನಲ್ಲಿ ಊಟ ಮಾಡುತ್ತಿದ್ದೆವು. ನಾನು ಹಾಗೇ ಅಪ್ಪನ ಮಡಿಲಲ್ಲಿ ನಿದ್ರೆಗೆ ಜಾರುತ್ತಿದ್ದೆ…………
ಅಂತಹ ಬಡತನದಲ್ಲೂ ಅಪ್ಪ ನನ್ನನ್ನು SSLC ಓದಿಸಿದರು. ಮುಂದೆ ಹಣದ ಕಾರಣದಿಂದ ನಾನು ಓದಲಾಗಲಿಲ್ಲ. ಉದ್ಯೋಗ ವಿನಿಮಯ ಕೇಂದ್ರದಲ್ಲಿ ನನ್ನ ಹೆಸರು ನೊಂದಾಯಿಸಿದ್ದೆ. ಆಗಾಗ ಅಪ್ಪನಿಗೆ ನಾನು ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆ. ಒಂದು ದಿನ
ಅದೃಷ್ಟವಶಾತ್ ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗೆ ಸಂದರ್ಶನಕ್ಕೆ ಕರೆಬಂದು ನಾನು ಅಲ್ಲಿ ಆಯ್ಕೆಯಾದೆ. ಆಗ ನೋಡಬೇಕಿತ್ತು ಅಪ್ಪನ ಸಂತೋಷ.
ನಾನು ಪೋಲಿಸ್ ಕಮೀಶನರ್ ಆದನೇನೋ ಎಂಬಷ್ಟು ಖುಷಿಪಟ್ಟಿದ್ದರು.
ಇಂದು ನನ್ನ ಬಟ್ಟೆಗಳನ್ನು ಇನ್ನೊಬ್ಬರು ಐರನ್ ಮಾಡುತ್ತಿದ್ದಾಗ ಇದೆಲ್ಲಾ ನೆನಪಾಯಿತು……
ಅಂದಿನ ದಿನಗಳ ಜೀವನ ವಿಧಾನ – ಬಡತನ ಕಾಡಿತು………….
ನನಗೆ ಗೊತ್ತು, ನೀವು ಈಗ ಖಚಿತವಾಗಿ ನಾನೊಬ್ಬ ಅಗಸ ಅಥವಾ ಮಡಿವಾಳ ಜಾತಿಯವನು ಎಂದು ಊಹಿಸಿರುತ್ತೀರಿ………
ನಿಮ್ಮ ಊಹೆ ತಪ್ಪು. ….
ಸೃಷ್ಟಿಯ ಒಂದು ಮನುಷ್ಯ ಜೀವಿ ಮಾತ್ರ ನಾನು……
ಏಕೆಂದರೆ ಬದುಕು ಯಾವ ಜಾತಿ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ