ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದು ಮಾಡಿ ಆಡಳಿತ ಮಂಡಳಿಯ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು ಎಂದು ದಲಿತ ವಿಮೋಚನಾ ಶಕ್ತಿ- ಕರ್ನಾಟಕದ ರಾಜ್ಯ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದರು.
ನವಭಾರತ ನಿರ್ಮಾತೃ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಅವಮಾನಿಸಿರುವ ಜೈನ್ ಯೂನಿವರ್ಸಿಟಿಯ ಮಾನ್ಯತೆಯನ್ನು ರದ್ದು ಮಾಡುವಂತೆ ಹಾಗೂ ಆಡಳಿತ ಮಂಡಳಿಯವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ನಗರದ ತಾಲೂಕು ಕಚೇರಿ ಬಳಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಸರ್ವರಿಗೂ ಸಮಪಾಲು ಸಮಬಾಳು ಎಂಬ ಆಶಯಗಳ ಮೇಲೆ ಬಹು ಸಂಸ್ಕೃತಿಯ ದೇಶಕ್ಕೆ ಇಡೀ ವಿಶ್ವವೇ ಒಪ್ಪಿ ಮೆಚ್ಚುವಂತಹ ಸಂವಿಧಾನವನ್ನು ಬರೆದುಕೊಟ್ಟ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದಲ್ಲದೆ ಪರಿಶಿಷ್ಟ ಜಾತಿ/ ಪಂಗಡಗಳ ಬಗ್ಗೆ ಕೀಳು ಅಭಿರುಚಿಯ ನಾಟಕದ ಸ್ಕಿಟ್ ಮಾಡಿ ಅಭಿನಯಿಸಿದ ವಿದ್ಯಾರ್ಥಿಗಳು ಮೊದಲು ಅವರಿಗೆ ವಿದ್ಯೆ ಕಲಿಯಲು ಯಾರು ಅವಕಾಶ ಮಾಡಿಕೊಟ್ಟರು ಎಂದು ಮೊದಲು ಮನಗಾಣಬೇಕು ಎಂದು ಗುಡುಗಿದರು.
ಇಂತಹ ಕೀಳು ಮಟ್ಟದ ನಾಟಕವನ್ನು ಪ್ರದರ್ಶನ ಮಾಡಲು ಅನುಮತಿ ನೀಡಿ, ದೇಶದ್ರೋಹಿ ಕೃತ್ಯಕ್ಕೆ ಪ್ರೊತ್ಸಾಹ ನೀಡಿದ ಜೈನ್ ವಿವಿಗೆ ನೀಡಿರುವ ಮಾನ್ಯತೆಯನ್ನು ಸರ್ಕಾರ ಈ ಕೂಡಲೇ ರದ್ದು ಮಾಡಿ ಆಡಳಿತ ಮಂಡಳಿಯ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕೇಸು ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಜೈನ್ ವಿವಿಯ ಮಾನ್ಯತೆ ರದ್ದುಪಡಿಸಿ, ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ನಂತರ ವಿವಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿಸಬೇಕು ಎಂದು ಒತ್ತಾಯಿಸಿ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ ಮಾಡಲಾಯಿತು.