ಜೆಡಿಎಸ್‌-ಬಿಜಿಪಿ ಮೈತ್ರಿ ಧರ್ಮ ಪಾಲಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ : ನಿಖಿಲ್ ಕುಮಾರಸ್ವಾಮಿ

ಕೋಲಾರ: ಲೋಕಸಭೆ ಚುನಾವಣೆಯು ಎನ್‌ಡಿಎ ಮೈತ್ರಿಯೊಂದಿಗೆ ನಡೆಯಲಿದ್ದು, ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಣ್ಣತಮ್ಮಂದಿರಂತೆ ಶ್ರಮಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಲೋಕಸಭೆ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ಎರಡ್ಮೂರು ದಿನದಲ್ಲಿ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆಯಿದ್ದು, ನಂತರ ಜಂಟಿ ಸಭೆಗಳು ಹೆಚ್ಚಾಗಿ ಆಗಬೇಕು. ಇಬ್ಬರ ನಡುವೆ ಸಮನ್ವಯತೆ ಬೆಳೆಯಬೇಕು ಎಂದರು.

ಸಂಘಟನೆ ಕೇವಲ ಚುನಾವಣೆ ಸಂದರ್ಭಕ್ಕೆ ಸಿಮೀತಗೊಳ್ಳಬಾರದು, ಅದು ನಿರಂತರವಾಗಿರಬೇಕು. ಆಗ ಮಾತ್ರ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ರಾಜ್ಯಾದ್ಯಂತ ಜೆಡಿಎಸ್ ಬಲಿಷ್ಠವಾಗಿ ಬೆಳೆಯಲು ಕಾರ್ಯಕರ್ತರು ಪ್ರಮುಖ ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲ ತಪ್ಪುಗಳಿಂದ ಅಭ್ಯರ್ಥಿಗಳು ಸೋಲನ್ನು ಅನುಭವಿಸುವಂತಾಗಿದೆ. ಆದರು ಚಟುವಟಿಕೆಗಳಲ್ಲಿ ಮುಖಂಡರು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಜೆಡಿಎಸ್‌ ಬಿಜೆಪಿ ಮೈತ್ರಿಯಲ್ಲಿ ಚುನಾವಣೆ ನಡೆಸಲು ತೀರ್ಮಾನ ಆಗಿದ್ದು ಸಿದ್ದತೆಗಳು ಸಹ ನಡೆಯುತ್ತಿವೆ. ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಎಚ್ಚರಿಸಿದರು.

ಕೋಲಾರದ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರ ಗಮನಕ್ಕೆ ತರಲಾಗುವುದು. 8 ಕ್ಷೇತ್ರಗಳ ಪೈಕಿ ೩ ಜೆಡಿಎಸ್ ಶಾಸಕರು ಇದ್ದಾರೆ. ವಾರದ ಕೊನೆಯಲ್ಲಿ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದೆ. ಯಾವುದೇ ಪಕ್ಷದ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದರು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಇತ್ತೀಚಿಗೆ 692 ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಬರಗಾಲ ಪ್ರಾರಂಭವಾಗಿದೆ. ಬೆಳೆಗಳಿಗೆ ಸ್ಥಿರ ಬೆಲೆ ದೊರೆಯುತ್ತಿಲ್ಲ. ದೇವೇಗೌಡರು ಈ ವಯಸ್ಸಿನಲ್ಲೂ ನಾಡಿನ ಬಗ್ಗೆ ಧ್ವನಿ ಎತ್ತಿದ್ದಾರೆ. ಆದರೆ ಅಧಿಕಾರದಲ್ಲಿ ಇರುವ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.

ಕಾರ್ಯಕರ್ತರು ಬೂತ್ ಮಟ್ಟದಿಂದ ಮುಂದೆ ನಿಂತು ಚುನಾವಣೆ ನಡೆಸಬೇಕು ಎಂಪಿ ಚುನಾವಣೆ ಹೇಗೊ ನಡೆದು ಹೋಗುತ್ತದೆ ಎಂ ಭಾವನೆ ಬೇಡ. ಪಕ್ಷದ ಗೌರವ ಉಳಿಸುವ ನಿಟ್ಟಿನಲ್ಲಿ ಚುನಾವಣೆ ನಡೆಸಬೇಕು ಎಂದು ಸಲಹೆ ನೀಡಿದರು.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಗಿರುವ ಕಹಿ ನೆನಪುಗಳನ್ನು ಮರೆಯುವ ರೀತಿ ಪ್ರತಿಯೊಬ್ಬರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಚುನಾವಣೆ ಸಮಯದಲ್ಲಿ ಮಾಡಿಕೊಂಡಿರುವ ತಪ್ಪುಗಳಿಂದ ಎದಿರಿಸುತ್ತಿರುವ ತೊಂದರೆಗಳ ಅನುಭವ ಆಗುತ್ತಿದೆ. ಹಿಂದಿನ ತಪ್ಪುಗಳು ಮರುಕಳುಹಿಸದಂತೆ ಕಾರ್ಯಕರ್ತರು ಎಚ್ಚೆತ್ತುಕೊಂಡು ಲೋಕಸಭೆ ಚುನಾವಣಗೆ ಸಿದ್ದರಾಗಬೇಕು. ಸಮಾಜದಲ್ಲಿ ಬಹುಬೇಗ ಮನವರಿಕೆಗೆ ಒಳಗಾಗುವುದು ಮಹಿಳೆಯರು, ಇನ್ನಾದರು ಮಹಿಳೆಯರು ಅಧಿಕಾರದಲ್ಲಿ ನೋಡಲು ಮುಖಂಡರು ಸಹಕಾರ ನೀಡಬೇಕು ಎಂದರು.

ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿಗೆ ಕಾರ್ಯಕರ್ತರ ಬೆಂಬಲ ಇದೆ. ಲೋಕಸಭೆ ಚುನಾವಣೆಯು ಯಶಸ್ವಿಯಾದರೆ ಮುಂದಿನ ಎಲ್ಲಾ ಚುನಾವಣೆಗಳನ್ನು ಮೈತ್ರಿ ಆಧಾರದ ಮೇರೆಗೆ ನಡೆಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ನ ತಾತ್ಕಾಲಿಕ ಗ್ಯಾರೆಂಟಿಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ಅವರು ಹೇಳುವ ಸುಳ್ಳುಗಳನ್ನು ಜನತೆ ನಂಬಬಾರದು. ಜಾಹೀರಾತು ಮೂಲಕ ಜನರನ್ನು ಯಾಮಾರಿಸಲು ಹೊರಟ್ಟಿದ್ದಾರೆ. ಜನಪರ ಕೆಲಸ ಮಾಡಿದ್ದರೆ ಜಾಹೀರಾತು ಯಾಕೆ ನೀಡಬೇಕು ಎಂದು ಪ್ರಶ್ನಿಸಿ, ಒಂದು ಸಮುದಾಯವನ್ನು ಓಲೈಕೆ ಮಾಡುವ ಕೆಲಸ ಸರಕಾರ ಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಗೋವಿಂದರಾಜು ಮಾತನಾಡಿದರು. ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಬಾಬು ಮೌನಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಚೌಡೇಶ್ವರಿ, ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಮುಖಂಡರಾದ ಜಿ.ಇ ರಾಮೇಗೌಡ,  ಗಾಯಿತ್ರಿ ಮುದ್ದಪ್ಪ, ತಿರುಮಲೇಶ್, ಕಡಗಟ್ಟೂರು ವಿಜಿಕುಮಾರ್, ತೋಟಗಳ ಅಶೋಕ್, ಲೋಕೇಶ್ ಮರಿಯಪ್ಪ, ಪುಸ್ತಿ ನಾರಾಯಣಸ್ವಾಮಿ, ಸೌದ್ ಶರೀಫ್, ಮುನೇಗೌಡ, ರಾಕೇಶ್, ಮುಂತಾದವರು ಇದ್ದರು

Leave a Reply

Your email address will not be published. Required fields are marked *