ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆ.ಡಿ.ಎಸ್ ಪಕ್ಷಕ್ಕೆ ಕನ್ನಡ ಪಕ್ಷ ಯಾವುದೇ ಷರತ್ತುಗಳಿಲ್ಲದೆ ಸಂಪೂರ್ಣವಾಗಿ ಬೆಂಬಲಿಸುವುದಾಗಿ ಕನ್ನಡ ಪಕ್ಷದ ರಾಜ್ಯ ಸಮಿತಿಯ ಸದಸ್ಯ ಸಂಜೀವ್ ನಾಯಕ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡ ಪಕ್ಷ ಮೊದಲಿನಿಂದಲೂ ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗಾಗಿ ಹೊರಾಡಿದ ಪಕ್ಷವಾಗಿದೆ. ಜೊತೆಗೆ ಜ್ಯಾತ್ಯಾತೀತ ನಿಲುವಿಗೆ ಬದ್ದವಾಗಿದೆ. ಪ್ರಸ್ತುತ ರಾಜ್ಯ ಹಾಗೂ ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಜನ ಸಾಮಾನ್ಯರ ಬದುಕಿನ ಜೊತೆ ಆಟವಾಡುತ್ತಿರುವ ಭ್ರಷ್ಟ ಬಿಜೆ.ಪಿ ಪಕ್ಷವನ್ನು ಧಿಕ್ಕರಿಸುವ ಸಲುವಾಗಿ ತಾಲ್ಲೂಕು ಕನ್ನಡ ಪಕ್ಷ ಜ್ಯಾತ್ಯಾತೀತ ಹಾಗು ಪ್ರಾದೇಶಿಕ ನಿಲುವಿಗೆ ಹತ್ತಿರವಾಗಿರುವ ಜ್ಯಾತ್ಯಾತೀತ ಜನತಾದಳದ ಅಭ್ಯರ್ಥಿ ಬಿ.ಮುನೇಗೌಡರನ್ನು ಬೆಂಬಲಿಸಿ ಚುನಾವಣೆಯಲ್ಲಿ ದುಡಿಯಲಾಗುವುದು ಎಂದರು.
ಕನ್ನಡ ಪಕ್ಷದ ಹಿರಿಯ ಮುಖಂಡ ಡಿ.ಪಿ ಆಂಜಿನೇಯ ಮಾತನಾಡಿ ನಾಲ್ಕು ದಶಕಗಳ ಹಿನ್ನೆಲೆ ಇರುವ ಕನ್ನಡ ಪಕ್ಷ ಮೊದಲಿನಿಂದಲೂ ಬಡವರ, ದೀನ ದಲಿತರ ಪರವಾಗಿರುವ ಪಕ್ಷ. ಸ್ಥಳೀಯ ವಿಚಾರಗಳಿಗೆ ಅನುಸಾರವಾಗಿ ತಾಲ್ಲೂಕಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಂದರ್ಭಾನುಸಾರ ಕೆಲವು ಪಕ್ಷಗಳ ಜೊತೆ ಕನ್ನಡ ಪಕ್ಷ ಹೊಂದಾಣಿಕೆ ಮಾಡಿಕೊಂಡು ಬಂದಿದೆ . ಪ್ರಸ್ತುತ ಪ್ರಾದೇಶಿಕ ಚಿಂತನೆಯಲ್ಲಿರುವ ಜಾತ್ಯಾತೀತ ಜನತಾ ದಳಕ್ಕೆ ಬೆಂಬಲಿಸುವ ಸಲುವಾಗಿ ಕನ್ನಡ ಪಕ್ಷದ ಸರ್ವ ಸಮ್ಮತದ ತೀರ್ಮಾನಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಮುನೇಗೌಡರಿಗೆ ಕನ್ನಡ ಪಕ್ಷ ಬೇಷರತ್ತು ಬೆಂಬಲ ಸೂಚಿಸಿದೆ ಎಂದು ಹೇಳಿದರು.
ಪ್ರಾದೇಶಿಕ ತತ್ವದಡಿ ಮತ್ತು ಮೂರು ಬಾರಿ ಸೋತಿರುವ ಮುನೇಗೌಡ ಜಕ್ಕಲಮಡಗು ಬತ್ತಿಹೋಗಿ ನೀರಿಗೆ ಹಾಹಾಕಾರ ಉಂಟಾಗಿದ್ದ ಕಾಲದಲ್ಲಿ ಜನತೆಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕನ್ನಡ ಪಕ್ಷ ಪದಾಧಿಕಾರಿಗಳ ಸರ್ವಸಮ್ಮತದೊಂದಿಗೆ ಈ ಬಾರಿ ಜೆಡಿಎಸ್ ಗೆ ಬೆಂಬಲ ಸೂಚಿಸಲಾಗಿದೆ ಎಂದು ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಡಿ.ವೆಂಕಟೇಶ್ ಹೇಳಿದರು.
ಜೆಡಿಎಸ್ ಸಿದ್ದಾಂತ ಮತ್ತು ಸ್ಥಳೀಯ ರಾಜಕೀಯ ಬದಲಾವಣೆಗಳಿಂದಾಗಿ ಧರ್ಮಾತೀತವಾಗಿ, ಜಾತ್ಯಾತೀತವಾಗಿ ಹಲವರು ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರುವುದು ಸಂತೋಷ, ಅವರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ತಾಲ್ಲೂಕು ಗೌರವಾಧ್ಯಕ್ಷ ಕೆಂಪರಾಜು ಹೇಳಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಮುನಿಪಾಪಯ್ಯ, ಗೌರವಾದ್ಯಕ್ಷ ರಂಗನಾಥ್, ಮುಖುಂಡರಾದ ಕೇಬಲ್ ಮುನಿರಾಜು, ಕುಮಾರ್ ಮಂಜುನಾಥ್, ಜಯರಾಮ್, ಮನು, ಅಂಜನ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು