ಈಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರಸೀಕೆರೆ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಭಾನುವಾರ ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕೆಲವು ತಿಂಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಶಿವಲಿಂಗೇಗೌಡ ಅವರು ಕಳೆದ ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜೆಡಿಎಸ್ ನಿಂದ ಮೂರು ಬಾರಿ ಶಾಸಕರಾಗಿರುವ ಶಿವಲಿಂಗೇಗೌಡ ಅವರು, 2008ರಲ್ಲಿ ಮೊದಲ ಬಾರಿ ವಿಧಾನಸಭೆ ಆಯ್ಕೆಯಾಗಿದ್ದರು, ಜೆಡಿಎಸ್ ಪಕ್ಷದಲ್ಲಿ ನಿರೀಕ್ಷಿತ ಮನ್ನಣೆ, ಸ್ಥಾನಮಾನ ಸಿಗದ ಕಾರಣ ಅವರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದು, ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಈ ಬಾರಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.