ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆಯಿಂದ ಬಿ.ಮುನೇಗೌಡರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಒತ್ತಾಯ

ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿ ಕುರಿತಂತೆ ಪಕ್ಷದ ವರಿಷ್ಠರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ಬಿ.ಮುನೇಗೌಡ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ ಉಳಿವಿಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಅನಾರೋಗ್ಯದ ನಡುವೆಯೂ ರಾಜ್ಯಾದ್ಯಂತ ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದಾರೆ, ರಾಜ್ಯದ ಜನತೆಯ ಹಿತದೃಷ್ಟಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳು ಆದ ಹೆಚ್.ಡಿ.ದೇವೇಗೌಡ ಅವರು ಅನೇಕ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ.

2018 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ಹಾಜರಿದ್ದ ರಾಷ್ಟ್ರ ಮಟ್ಟದ ಮುಖಂಡರು, ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವಾಗ ಮಾತನಾಡದೆ ಅವಮಾನಿಸಿರುವುದು ಕುಮಾರಸ್ವಾಮಿ ಅವರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಪ್ರಸ್ತುತ ಪ್ರಾದೇಶಿಕ ಪಕ್ಷದ ಅಸ್ಥಿತ್ವ, ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾತುಕತೆ ನಡೆದಿದೆ. ಆದರೆ ಈ ನಿಲುವನ್ನು ಕಳೆದ ಹಲವು ವರ್ಷಗಳಿಂದ ಪಕ್ಷದಿಂದ ಅವಕಾಶ ಪಡೆದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿರುವ ಮುನೇಗೌಡ ಅವರು, ಪಕ್ಷ ಹಾಗೂ ವರಿಷ್ಠರ ವಿರುದ್ಧ ಮತ್ತೆ ಮನಸೋಇಚ್ಛೆ ಮಾತನಾಡಿದ್ದಾರೆ.

ಮುನೇಗೌಡರ ಈ ವರ್ತನೆಯಿಂದ ತಾಲೂಕಿನಲ್ಲಿ ಪದೇ ಪದೆ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. 2013ರಲ್ಲಿ ಟಿಕೆಟ್ ದೊರಕದ ವೇಳೆ ಇದೇ ರೀತಿ ಪಕ್ಷ ಹಾಗೂ ವರಿಷ್ಠರ ವಿರುದ್ಧ ಹೀನಾಮಾನವಾಗಿ ಅವಮಾನ ಮಾಡಿದ್ದು, ಈಗ ಮತ್ತೆ ಅದೇ ರಾಗ ಆರಂಭಿಸಿದ್ದಾರೆ. ಪಕ್ಷದ ಮುಖಂಡರು ಆರಂಭಿಕ ಹಂತದಲ್ಲಿಯೇ ಇತ್ತ ಗಮನಹರಿಸಿ ಈ ಕೂಡಲೇ ಪಕ್ಷದಿಂದ ಮುನೇಗೌಡ ಅವರನ್ನು ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸಿದರು.

ಇತರೆ ಮುಖಂಡರು ಮಾತನಾಡಿ ಬಿಜೆಪಿ – ಜೆಡಿಎಸ್ ನಡುವಿನ ಮೈತ್ರಿ ಕುರಿತಾದ ಪಕ್ಷದ ವರಿಷ್ಠರ  ನಿಲುವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಬೆಂಬಲಿಸುತ್ತೇವೆ. ಮುನೇಗೌಡ ಅವರಿಗೆ ಪಕ್ಷದ ಎಲ್ಲಾ ಅಧಿಕಾರ ನೀಡಿದರು ಪದೇ ಪದೇ ಪಕ್ಷ ಹಾಗೂ ಪಕ್ಷದ ವರಿಷ್ಠರ ವಿರುದ್ಧ ಹೇಳಿಕೆ ನೀಡುತ್ತಿರುವುದು ಉತ್ತಮ ನಡುವಳಿಕೆಯಲ್ಲ.

ಕಳೆದ 10.12ವರ್ಷದಿಂದ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದರು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಗಿದ್ದವರು ಪತ್ರಿಕೆಯೊಂದರಲ್ಲಿ ವರಿಷ್ಠರ ನಿಲುವನ್ನು ಅಗೌರವವಾಗಿ ಮಾತನಾಡಿರುವುದು ವಿಪರ್ಯಾಸ. ಅಲ್ಲದೆ ಜೆಡಿಎಸ್  ಪಕ್ಷ ಸಾಯುತ್ತದೆ ಎಂಬುವ ಮೂಲಕ ಮುನೇಗೌಡ ಅವರಿಗೆ ರಾಜಕೀಯ ಭವಿಷ್ಯ ಇಲ್ಲ ಎಂಬುದು ಬಯಲಾಗಿದೆ.

ಕಳೆದ ಚುನಾವಣೆಯಲ್ಲಿ ಮುನೇಗೌಡ ಅವರಿಗೆ ಬಿದ್ದ ಮತಗಳು, ಪಕ್ಷಕ್ಕೆ ದೊರೆತ ಮತಗಳಾಗಿವೆಯೇ ಹೊರತು ಮುನೇಗೌಡರ ವರ್ಚಸ್ಸಿನ ಮತಗಳಲ್ಲ. ಬೇಕಾಬಿಟ್ಟಿ ಹೇಳಿಕೆ ನೀಡಿ ಪಕ್ಷಕ್ಕೆ ಅಗೌರವ ತೋರುವ ಬದಲು ಮುನೇಗೌಡ ಅವರು ದೊಡ್ಡಬಳ್ಳಾಪುರವ ಮರೆತು ಇತರೆ ಕೆಲಸಗಳತ್ತ ಗಮನ ಹರಿಸುವುದು ಒಳಿತು ಎಂದರು.

 ಪಕ್ಷದ ವರಿಷ್ಠರ ನಿಲುವಿಗೆ ಎಲ್ಲರೂ ಬದ್ಧರಾಗಿರಬೇಕು. ಬೇರೆಯವರ ಕುರಿತು ಟೀಕೆ ಮಾಡುವುದಿಲ್ಲ ಅದು ಅವರ ವಯಕ್ತಿಕ ಅಭಿಪ್ರಾಯ, ಆದರೆ ಪಕ್ಷದ ಸಂಘಟನೆಯಲ್ಲಿ ಎಲ್ಲರೂ ಒಟ್ಟಾಗಿ ಸಾಗಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯರಾದ ಹೆಚ್.ಅಪ್ಪಯ್ಯಣ್ಣ, ಎ. ನರಸಿಂಹಯ್ಯ, ಮುಖಂಡರಾದ ಸಾರಥಿ ಸತ್ಯಪ್ರಕಾಶ್, ರಾ.ಬೈರೇಗೌಡ, ನಗರಸಭಾ ಸದಸ್ಯ ತ.ನ.ಪ್ರಭುದೇವ್ ತಳವಾರ ನಾಗರಾಜ್ ಮುಂತಾದವರು ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಶ್ವಥ್ ನಾರಾಯಣ್, ಕುಂಟನಹಳ್ಳಿ ಮಂಜುನಾಥ್, ಆನಂದ್, ಪ್ರವೀಣ್ ಗೌಡ, ಅಶ್ವಥ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *