ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್ ಬಾಬು ವಾಸಸ್ಥಳ ಪ್ರಶ್ನಿಸಿದ ಶಾಸಕ ಎಸ್.ಎನ್ ನಾರಾಯಣಸ್ವಾಮಿ

ಕೋಲಾರ: ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಹುಟ್ಟಿದ್ದು ಮೈಸೂರಿನಲ್ಲಿ, ಓದಿದ್ದು ಊಟಿಯಲ್ಲಿ, ವಾಸವಿರೋದು ಬೆಂಗಳೂರಿನಲ್ಲಿ. ಆದರೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಹೊರಗಿನವರು ಎಂದು ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷ ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಬಂಗಾರಪೇಟೆ ಮತ್ತು ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ‌ ಮಾತನಾಡಿದ ಅವರು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಲೇಶ್ ಬಾಬು ಎರಡೂ ಬಾರಿ ಸೋತಿದ್ದಾರೆ. ಇಲ್ಲಿ ಸಲ್ಲದವ ಎಲ್ಲೂ ಸಲ್ಲುವುದಿಲ್ಲ ಎಂಬ ಗಾದೆ ಗೊತ್ತಿರಲಿ. ಕಳೆದ ಬಾರಿಯೂ ಬಿಜೆಪಿ ಹಾಗೂ ಜೆಡಿಎಸ್‌ ಜತೆಗೂಡಿದ್ದವು, ಮೈತ್ರಿ ಅವರಿಗೇನೂ ಹೊಸದಲ್ಲ ಸೋತ ಮೇಲೆ 9 ತಿಂಗಳು ಕ್ಷೇತ್ರದಿಂದ ನಾಪತ್ತೆಯಾಗಿದ್ದರು. ಇವಾಗ ಕಾಣಿಸಿಕೊಳ್ಳಲು ಹೊರಟಿದ್ದಾರೆ. ಜನ ಬುದ್ದಿವಂತರಿದ್ದಾರೆ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಅವರಿಗೆ‌ ಮುಖ ತೋರಿಸಬೇಕೋ‌ ಬೇಡವೋ ಹೇಳಿ ಮಾನ ಹೋದರೆ ಬೆಂಗಳೂರಿಗೆ ಹೋಗಲ್ಲ ನನ್ನ ಮರ್ಯಾದೆ ಉಳಿಯಬೇಕು ಎಂದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು. ಸಿದ್ದರಾಮಯ್ಯ ಅವರಿಗೆ ಗರ್ವಭಂಗ ಮಾಡುವುದಾಗಿ ದೇವೇಗೌಡರು ಹೇಳುತ್ತಾರೆ. ಗರ್ವ ಇದ್ದಿದ್ದರೆ ಎರಡು ಬಾರಿ‌ ಮುಖ್ಯಮಂತ್ರಿ ಆಗುತ್ತಿದ್ದರೆ ಎಂದು ಪ್ರಶ್ನಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಒಂದು ಸಿದ್ಧಾಂತ ಇಲ್ಲ ಮಲ್ಲೇಶ್ ಬಾಬು ತಂದೆ‌ ಐಎಎಸ್ ಅಧಿಕಾರಿಯಾಗಿದ್ದವರು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು ಜನರ ಕಷ್ಟಗಳು ಗೊತ್ತಿಲ್ಲ. ಹೀಗಾಗಿ, ಶ್ರೀಮಂತರ ಮನೆಯಲ್ಲಿ ಹುಟ್ಟಿರುವ ಮಲ್ಲೇಶ್ ಬಾಬು ಬೇಕೋ, ಬಡವರ ಮನೆಯಲ್ಲಿ ಜನರ ಕಷ್ಟಗಳನ್ನು ನೋಡಿ ಬೆಳೆದಿರುವ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಬೇಕೋ ಯೋಚನೆ ಮಾಡಿ ಮತ ಹಾಕಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಇವತ್ತು ಕಾಂಗ್ರೆಸ್ ಮುಂದೆ ದೊಡ್ಡ ಸವಾಲು ಇದೆ ಅಧಿಕಾರ ಕಳೆದುಕೊಂಡು 10 ವರ್ಷಗಳಾಗಿದೆ. ಮೋದಿ, ಅಮಿತ್ ಶಾ ಜನರನ್ನು ಮರುಳು ಮಾಡಿ ,‌ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ ವರ್ಷಕ್ಕೆ 2 ಕೋಟೆ ಉದ್ಯೋಗ ‌ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದರು.

ಈಗ ಇಡೀ ದೇಶ ಕರ್ನಾಟಕದತ್ತ ನೋಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಈ ಕ್ಷೇತ್ರದಲ್ಲಿ ಎಸ್.ಎನ್.ನಾರಾಯಣಸ್ವಾಮಿ ಹ್ಯಾಟ್ರಿಕ್ ಸಾಧನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ‌ ಮತ ಹಾಕಿ ಗೌತಮ್ ಅವರನ್ನು ಗೆಲ್ಲಿಸಬೇಕು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು. ಹೇಳಿದಂತೆ ನಡೆದುಕೊಂಡ ‌ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಗ್ಯಾರಂಟಿ ಯೋಜನೆ ನೀಡಿದ್ದಾರೆ. ಮೋದಿ ಯಾವ ಯೋಜನೆ‌ ನೀಡಿದ್ದಾರೆ ಹೇಳಿ ಜಾತಿ, ‌ಧರ್ಮದ‌‌ ವಿಚಾರ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಜೆಡಿಎಸ್’ನವರು ಅವಕಾಶವಾದಿಗಳು. ಕೋಮುವಾದಿ ಸರ್ಕಾರ ತಪ್ಪಿಸಲು ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಈಗ ತನ್ನ ಅಸ್ತಿತ್ವಕ್ಕೆ ಕೋಮುವಾದಿ ಪಕ್ಷದ‌ ಜೊತೆ ಕೈಜೋಡಿಸಿದ್ದಾರೆ ಎಂದು ಟೀಕಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗಂಡಸರು ಸಿಗಲಿಲ್ಲವೇ ಎಂಬುದಾಗಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕೇಳುತ್ತಾರೆ ನೀನು ಎಲ್ಲಿಂದ ಬಂದು ಮುಳಬಾಗಿಲಿನಲ್ಲಿ ಸ್ಪರ್ಧಿಸಿದೆ ಬಂಗಾರಪೇಟೆಯಲ್ಲಿ ಸ್ಪರ್ಧಿಸಿದ್ದ ಮಲ್ಲೇಶ್ ಬಾಬು ಕೋಲಾರ ‌ತಾಲ್ಲೂಕಿನವರು ವಾಸ ಬೆಂಗಳೂರಿನಲ್ಲಿ ಕೋಡಿಹಳ್ಳಿ ಮಂಜುನಾಥ್, ವರ್ತೂರು ಪ್ರಕಾಶ್, ಜೆ.ಕೆ ಕೃಷ್ಣಾರೆಡ್ಡಿ ಇವರೆಲ್ಲರನ್ನು ಹೊರಗಿನಿಂದ ಕರೆತಂದು ಅಭ್ಯರ್ಥಿ ಕಣಕ್ಕಿಳಿಸುವ ಸಂಪ್ರದಾಯ ಹುಟ್ಟು ಹಾಕಿದ್ದೇ ಜೆಡಿಎಸ್ ಬಿಜೆಪಿಯವರು ಎಂದು ಟೀಕಿಸಿದರು.

ಸಂಸದ ಮುನಿಸ್ವಾಮಿ ಒಂದು‌ ಜೇಬಿನಲ್ಲಿ ಪೆಟ್ರೋಲ್, ಇನ್ನೊಂದು ಜೇಬಿನಲ್ಲಿ ಬೆಂಕಿ‌ಕಡ್ಡಿ ಇಟ್ಟುಕೊಂಡಿರುತ್ತಾರೆ. ಹೋದಲ್ಲಿ ಬಂದಲ್ಲಿ ಜಗಳ ತಂದಿಡುತ್ತಾರೆ ಎಂದು ಆರೋಪಿಸಿದರು.

ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ, ಕಳೆದ ‌ಬಾರಿ ಪುಲ್ವಾಮ ಪ್ರಕರಣವನ್ನು ಭಾವನಾತ್ಮಕ ವಿಚಾರ ಮಾಡಿಕೊಂಡು ಆಟವಾಡಿದ್ದರಿಂದ ಕೆ.ಎಚ್.ಮುನಿಯಪ್ಪ ಸೋಲು ಕಂಡರು ಸಂಸದ ಮುನಿಸ್ವಾಮಿ ಬರೀ ಗಲಾಟೆ ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಕೊಟ್ಟಿಲ್ಲ. ಅವರು ನನ್ನ ಹಳೆ ಸ್ನೇಹಿತ ಅವತ್ತಿನಿಂದ ಇವತ್ತಿನವರೆಗೂ ಜಗಳ ಮಾಡುತ್ತಾ ಇರುತ್ತಾರೆ ನಾನು ನಿಮ್ಮಗಳ ಬದುಕಿಗಾಗಿ ಬಂದಿದ್ದೇನೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಸ್ವಾಗತಿಸಿ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ನಿರೂಪಿಸಿದರು ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ,‌ ಕಾರ್ಯಾಧ್ಯಕ್ಷ ಊರುಬಾಗಿಲು, ಮುಖಂಡರಾದ ಕೆ.ಜಯದೇವ್, ರತ್ಮಮ್ಮ, ಯಲ್ಲಪ್ಪ, ಪಾರ್ಥ, ಶಂಶುದ್ದೀನ್ ಬಾಬು, ಚಂದುಕುಮಾರ್, ಜಯಣ್ಣ, ಗೋಪಾಲರೆಡ್ಡಿ ಕ್ಷೇತ್ರದ ಗ್ರಾಪಂ ಅಧ್ಯಕ್ಷರುಗಳು ಮುಂತಾದವರು ಇದ್ದರು.

Leave a Reply

Your email address will not be published. Required fields are marked *