ಜೆಡಿಎಸ್‌ನಲ್ಲಿ ಪಂಚರತ್ನ ಯಾತ್ರೆಗಿದ್ದ ಒಗ್ಗಟ್ಟಿನಲ್ಲಿ ಮತ್ತೆ ಬಿರುಕು; ಬಿ.ಮುನೇಗೌಡಗೆ ಟಿಕೆಟ್ ಕೊಟ್ಟರೆ ಸೋಲು ಖಚಿತ ಎಂದ ಹುಸ್ಕೂರ್ ಆನಂದ್

ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ್ದ ಸ್ಥಳೀಯ ಜೆಡಿಎಸ್ ನಾಯಕರಲ್ಲಿ ಮತ್ತೆ ಅಸಮಾಧಾನ ಸ್ಫೋಟಿಸಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ವರ್ತನೆಗೆ ಮುಖಂಡ ಹಾಗೂ ಟಿಕೆಟ್ ಆಕಾಂಕ್ಷಿ ಹುಸ್ಕೂರು ಆನಂದ್ ಅವರು ಪತ್ರಿಕಾಗೋಷ್ಠಿ ಆಯೋಜನೆ ಮಾಡಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಮುನೇಗೌಡರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ಕೊಟ್ಟರೆ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾದರೆ ಮಾತ್ರ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ತರುತ್ತೇವೆ. ಟಿಕೆಟ್ ಆಕಾಂಕ್ಷಿಗಳಲ್ಲಿ ನಾನು ಹಾಗೂ ಹರೀಶ್ ಗೌಡ ಕೂಡ ಇದ್ದೇವೆ ಎಂದರು.

ನ.27 ರಂದು ಹಿರಿಯ ಮುಖಂಡ ಹೆಚ್.ಅಪ್ಪಯ್ಯಣ್ಣ ಮನೆಯಲ್ಲಿ ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಆರೂಢಿ, ಹೊಸಹಳ್ಳಿ ಭಾಗದಲ್ಲಿ ಯಾತ್ರೆ ಸ್ವಾಗತಿಸುವ ಜವಾಬ್ದಾರಿ ನನಗೆ ವಹಿಸಲಾಗಿತ್ತು. ದೊಡ್ಡಬೆಳವಂಗಲದಲ್ಲಿ ಹರೀಶ್ ಗೌಡರು, ಮಧುರೆಯಲ್ಲಿ ಮುನೇಗೌಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿತ್ತು. ಆದರೆ, ಆರೂಢಿಯಲ್ಲಿ ಮುನೇಗೌಡರ ಸಹೋದರ ರಾಜಗೋಪಾಲ್ ಹಾಗೂ ಅವರ ಕಡೆಯವರು ಕಾರ್ಯಕ್ರಮ ಆಯೋಜಿಸದಂತೆ ಧಮ್ಕಿಯನ್ನು ನನಗೆ ಹಾಕಿದ್ದಾರೆ.

ಬೃಹತ್ ಕಟೌಟ್, ಬ್ಯಾನರ್‌ಗಳ ಅಳವಡಿಕೆಗೂ ಅಡ್ಡಿಪಡಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಮಾಡುವ ಎಲ್ಲಾ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ನಾವು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಹೀಗಿರುವಾಗ, ಮುನೇಗೌಡರಿಗೆ ಟಿಕೆಟ್ ಖಚಿತವಾದರೆ ಕುಟುಂಬದ ಹಸ್ತಕ್ಷೇಪ ಹೆಚ್ಚಾಗಿ ದೊಡ್ಡಬಳ್ಳಾಪುರದಲ್ಲಿ ಶಾಂತಿ ಕದಡಲಿದೆ ಎಂದು ದೂರಿದರು.

ಆರೂಢಿಯಲ್ಲಿ ಪೆಂಡಾಲ್ ಹಾಕಿಸಿದ ವಿಚಾರವನ್ನೇ ಪ್ರತಿಷ್ಠೆಯಂತೆ ಬಿಂಬಿಸಿ, ಜೆಡಿಎಸ್ ವಾಟ್ಸಪ್ ಗ್ರೂಪಿನಲ್ಲಿ `ಇದೇ ಮುನೇಗೌಡರ ಪವರ್’ ಎಂದು ಹಾಕಿ ಅವಮಾನ ಮಾಡಿದ್ದಾರೆ. ಹತ್ತು ಹಳ್ಳಿಗಳಲ್ಲಿ ಒಂದೇ ಒಂದು ಕಡೆ ಕುಮಾರಣ್ಣನಿಗೆ ಹಾರ ಹಾಕಿಲ್ಲ. ಇದು ಕುಮಾರಣ್ಣನಿಗೆ ಮಾಡಿದ ಅವಮಾನ. ಪಕ್ಷದ ಹಿರಿಯ ಮುಖಂಡ ಅಪ್ಪಯ್ಯಣ್ಣ ಅವರಗಮನಕ್ಕೆ ತಂದೇ ಪತ್ರಿಕಾಗೋಷ್ಠಿ ನಡೆಸಿದ್ದೇನೆ ಎಂದು ಹೇಳಿದರು.

ಬ್ಯಾನರ್ ಕಟ್ಟದಂತೆ ಧಮ್ಕಿ:

ನ. 28ರಂದು ದೊಡ್ಡಬಳ್ಳಾಪುರದಲ್ಲಿ ರಾತ್ರಿ ಬ್ಯಾನರ್ ಕಟ್ಟಲು ಹೋದ ನಮ್ಮ ಕಡೆಯವರಿಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. ರಾಜಘಟ್ಟದಲ್ಲಿ ಮುನೇಗೌಡರ ಪುತ್ರ ಅಂಜನ್ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಈಗಲೇ ಇಷ್ಟೊಂದು ದರ್ಪ ತೋರಿದರೆ ಅಧಿಕಾರ ಸಿಕ್ಕರೆ ಇವರು ತಾಲೂಕಿನಲ್ಲಿ ಶಾಂತಿ ಹಾಳು ಮಾಡುವುದರಲ್ಲಿ ಅನುಮಾನವಿಲ್ಲ. ಶಾಸಕರಾಗಬೇಕಾದವರು ಸಹಕಾರ ನೀಡಬೇಕೆ ಹೊರತು ದ್ವೇಷ ಸಾಧಿಸಬಾರದು ಎಂದು ದೂರಿದ್ದಾರೆ.

ನಾನು ಪ್ರಬಲ ಟಿಕೆಟ್ ಆಕಾಂಕ್ಷಿ :

ಪಕ್ಷ ಸಂಘಟನೆಗಾಗಿ ಹತ್ತು ವರ್ಷದಿಂದ ದುಡಿದಿದ್ದೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಅವರನ್ನೂ ಕೇಳಿದ್ದು, ಕಚೇರಿಗೆ ಬಂದು ಮಾತನಾಡುವಂತೆ ತಿಳಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆರೂಢಿ, ಹೊಸಹಳ್ಳಿ ಭಾಗದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *