‘ಜೂ.28ರಿಂದ 30ರವರೆಗೆ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆ: ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ’- ಬಜರಂಗದಳ ಕೋಲಾರ ವಿಭಾಗಿಯ ಸಂಯೋಜಕ ನರೇಶ್ ರೆಡ್ಡಿ ಮನವಿ

ದೊಡ್ಡಬಳ್ಳಾಪುರ: ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಹಿಂದು ಬಾಂಧವರ ಸಂಘಟನೆ, ಹಿಂದೂಗಳ ಒಗ್ಗೂಡುವಿಕೆಗಾಗಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ವತಿಯಿಂದ ನಗರದ ಭಗತ್ ಸಿಂಗ್ ಮೈದಾನದಲ್ಲಿ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆಯನ್ನು ಜೂನ್ 28ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಬಜರಂಗದಳ ಕೋಲಾರ ವಿಭಾಗಿಯ ಸಂಯೋಜಕ ನರೇಶ್ ರೆಡ್ಡಿ  ತಿಳಿಸಿದರು.

ನಗರದ ಬಜರಂಗದಳ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷಗಳಿಂದ ಶ್ರೀರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆಯನ್ನು ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಚುನಾವಣೆಗಳ ಹಿನ್ನೆಲೆಯಲ್ಲಿ ತಡವಾಗಿದೆ. ಈ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಯಾವುದೇ ವ್ಯಕ್ತಿಯನ್ನು ವೈಭವೀಕರಿಸದೇ ವಿಜೃಂಭಣೆಯಿಂದ ಹಾಗೂ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಜೂನ್ 28ರ ಸಂಜೆ 4 ಗಂಟೆಗೆ ನಗರದ ಶ್ರೀ ಮುತ್ಯಾಲಮ್ಮ ದೇವಾಲಯದ ಬಳಿಯಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳ ಜಾಥಾ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜೂನ್ 29ರಂದು ಬೆಳಿಗ್ಗೆ 7 ಗಂಟೆಯಿಂದ ಗೋ ಪೂಜೆ, ಮಹಾ ಸುದರ್ಶನ ಹೋಮ, ಶ್ರೀ ರಾಮ ತಾರಕ ಹೋಮ, ಗ್ರಾಮ ದೇವತೆ ಹೋಮ, ಮಧ್ಯಾಹ್ನ ಸಾವಿರಾರು ಮಹಿಳೆಯರಿಂದ ಲಲಿತ ಸಹಸ್ರನಾಮ ಮತ್ತು ಹನುಮಾನ್ ಚಾಲಿಸ್ ಸಾಮೂಹಿಕ ಪಠಣ ನಡೆಯಲಿದೆ. ಸಂಜೆ 4 ಗಂಟೆಗೆ ಕಲ್ಯಾಣೋತ್ಸವ ನಡೆಯಲಿದ್ದು, ಕಲ್ಯಾಣೋತ್ಸದಲ್ಲಿ ದಂಪತಿಗಳು ಭಾಗವಹಿಸಲು ಅವಕಾಶವಿದೆ. ನಂತರ ಗೋ ಆರತಿ ನಡೆಯಲಿದೆ ಎಂದು ತಿಳಿಸಿದರು.

ಜೂನ್ 30ರ ಮಧ್ಯಾಹ್ನ 12.30ಕ್ಕೆ ಭಗತ್ ಸಿಂಗ್ ಕ್ರೀಡಾಂಗಣದಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾರತ ಮಾತೆ, ಶ್ರೀರಾಮ, ಹನುಮ, ಶಿವ ಪ್ರತಿಮೆಗಳೊಂದಿಗೆ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಭುವನೇಶ್ವರಿದೇವಿಯ ಮೆರವಣಿಗೆ ವಿವಿಧ ಕಲಾತಂಡಗಳೊಡನೆ ನಡೆಯಲಿದೆ. ನಂತರ ಕಾರ್ಕಳದ ಶೀಕಾಂತ್ ಶೆಟ್ಟಿ ಅವರಿಂದ ದಿಕ್ಸೂಚಿ ಭಾಷಣವಿದೆ. ಸಂಜೆ ರಾಮಾಯಣ ಕಥೆಯ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಕಾರ್ಯಕ್ರಮಗಳಿವೆ ಎಂದು ಹೇಳಿದರು.

ಹಿಂದೂ ಸಮಾಜದ ಪ್ರತೀಕವಾಗಿ ಶಕ್ತಿ ತೋರಿಸುವ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ರವಿ ಕುಮಾರ್, ಉಪಾಧ್ಯಕ್ಷ  ಎಸ್.ಎಂ.ಸದಾಶಿವಯ್ಯ, ಬಜರಂಗದಳ ಸತ್ಸಂಗದ ಪ್ರಮುಖ ಭಾಸ್ಕರ್ ಭಗತ್,  ವಿಶ್ವ ಹಿಂದೂ ಪರಿಷತ್ ನಗರ ಘಟಕದ ಅಧ್ಯಕ್ಷ ಮಧುಸೂದನ್, ಕಾರ್ಯದರ್ಶಿ ಮಂಜುಳಾ, ತಾಲೂಕು ಸಂಯೋಜಕ ವಿರಾಜ್ ಹಾಜರಿದ್ದರು.

Leave a Reply

Your email address will not be published. Required fields are marked *