ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ನೇತೃತ್ವದಲ್ಲಿ ಜೂನ್ 21ರಂದು ಬೆಳಿಗ್ಗೆ 6ಗಂಟೆಗೆ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯೋಗವನ್ನು ಉತ್ತೇಜಿಸಬೇಕಿದೆ ಎಂದು ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದ್ದಾರೆ.
ನಗರದ ಕೆಎಂಎಚ್ ಕಲ್ಯಾಣ ಮಂದಿರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯೋಗ ಯಾವುದೇ ಧರ್ಮ, ಜಾತಿ ವರ್ಗಗಳಿಗೆ ಸೀಮಿತವಾಗದೇ ಮುಕ್ತವಾಗಿ ಯಾರು ಬೇಕಾದರೂ ಮಾಡಬಹುದಾಗಿದೆ. ಮುಸ್ಮಿಂ ಸಮುದಾಯದವರು ಮಾಡುವ ನಮಾಜ್ ಸಹ ಯೋಗದ ಒಂದು ಭಾಗವಾಗಿದ್ದು, ತಮ್ಮ ಧರ್ಮಾಚರಣೆಗಳ ಮೂಲಕ ಯೋಗ ಮಾಡಬಹುದಾಗಿದೆ ಎಂದರು.
ಮೋದಿ ಅವರು ಪ್ರಧಾನಿಯಾದ ನಂತರ ವಿಶ್ವ ಯೋಗ ದಿನಾಚರಣೆ ಜಾರಿಯಾಗಿದ್ದು, ಜಗತ್ತಿನ 150ಕ್ಕೂ ಹೆಚ್ಚು ರಾಷ್ಟ್ರಗಳು ಯೋಗ ದಿನಾಚರಣೆಯನ್ನು ಆಚರಿಸುತ್ತವೆ. ದೊಡ್ಡಬಳ್ಳಾಪುರ ಸಹ ಯೋಗಕ್ಕೆ ಹೆಸರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಯೋಗದಲ್ಲಿ ಭಾಗವಹಿಸಿರುವ ಯೋಗಪಟುಗಳು ಇಲ್ಲಿದ್ದಾರೆ ಎಂದು ತಿಳಿಸಿದರು.
ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ಗೌರವ ಅಧ್ಯಕ್ಷ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಯೋಗ ಶರೀರ, ಮನಸ್ಸು, ಆತ್ಮಗಳ ಸಮಾಗಮವಾಗಲಿದೆ. ಯೋಗದಿಂದ ದೇಹಕ್ಕೆ ಹಾಗೂ ಮನಸ್ಸಿಗೆ ಚೈತನ್ಯ ದೊರಕುವುದಲ್ಲದೇ ಯೋಗದ ಹೆಸರಿನಲ್ಲಿ ಎಲ್ಲರೂ ಒಂದಾಗಿ ಸಾಮರಸ್ಯ ಮೂಡಿಸುವ ವೇದಿಕೆಯಾಗಲಿದೆ ಎಂದು ಹೇಳಿದರು.
ಯೋಗದಿಂದ ಸಂಸ್ಕೃತಿ, ನಡೆಯಿಂದ ಒಂದಾಗುವ ಸುಸಂದರ್ಭ ಇದಾಗಿದೆ. ಯೋಗ ಮತ್ತು ಪ್ರಾಣಾಯಾಮದ ಮಹತ್ವನ್ನು ಜನರಿಗೆ ನೀಡುವ ಪ್ರಯತ್ನವಾಗಲಿದ್ದು, ಸಮಯದ ಮಹತ್ವ ತಿಳಿಸಲಾಗುವುದು. ಸುಮಾರು 40 ನಿಮಿಷಗಳ ಕಾಲ ಸಾಮೂಹಿಕವಾಗಿ ಯೋಗಾಭ್ಯಾಸ ನಡೆಯಲಿದೆ. ಎಲ್ಲಾ ವಯೋಮಾನದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗದ ಮಹತ್ವವನ್ನು ಅರಿಯಬೇಕಿದೆ ಎಂದು ತಿಳಿಸಿದರು.
ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ಕಾರ್‍ಯದರ್ಶಿ ಬಿ.ಜಿ.ಅಮರನಾಥ್ ಮಾತನಾಡಿ, ಇಂದಿನ ಪೀಳಿಗೆ ಆರೋಗ್ಯವನ್ನು ನಿರ್ಲಕ್ಷಿಸುವ ಪರಿಣಾಮ, ವಯೋವೃದ್ದರಿಗಿಂತ ಹೆಚ್ಚಿನ ಕಾಯಿಲೆಗಳು ಕಿರಿಯರಿಗೆ ಬರುತ್ತಿವೆ. ಈ ದಿಸೆಯಲ್ಲಿ ಯೋಗದ ಮಹತ್ವ ತಿಳಿಸುವ ಸಲುವಾಗಿ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ಮುಂದಿನ ದಿನಗಳಲ್ಲಿ ಯೋಗ ಸ್ಪರ್ಧೆಗಳು, ಗ್ರಾಮೀಣ ಪ್ರದೇಶದಲ್ಲಿ ಯೋಗದ ಕುರಿತ ವಿವಿಧ ತರಬೇತಿ ಕಾರ್ಯಕ್ರಮಗಳು, ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.
ಈ ವೇಳೆ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ಖಜಾಂಚಿ ಪಿ.ಕೆ.ಶ್ರೀನಿವಾಸ್, ಸಂಚಾಲಕರರಾದ ಬಿ.ಎಲ್.ಸೀತಾರಾಂ, ಡಿ.ವಿ.ಗಿರೀಶ್, ಡಿ.ಪಿ.ಗೋಪಾಲ್, ಸನಾತನಮೂರ್ತಿ, ನಗರಸಭಾ ಸದಸ್ಯೆ ಎಸ್.ವತ್ಸಲಾ, ಸಮಿತಿಯ ಸದಸ್ಯರಾದ ಎ.ಕೆ.ರಮೇಶ್, ಯಶೋದ, ಬಿ.ಪಿ.ಪ್ರಿಯಾಂಕ, ಗಿರಿಜಾ, ಗೀತಾ, ರಾಮಕೃಷ್ಣ, ದಾಕ್ಷಾಯಿಣಿ, ವಿನೋದ್ ಭಾಗವಹಿಸಿದ್ದರು.