ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ

ನಗರ ಕೇಂದ್ರಿತವಾಗಿದ್ದ ಜೂಜು ಅಡ್ಡೆಗಳು ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಜಾಲ ಹಬ್ಬಿದೆ. ತಾಲೂಕಿನಲ್ಲಿರುವ ಕೆರಯಂಗಳ, ತೋಟದ ಮನೆಗಳು, ನೀಲಗಿರಿ ತೋಪುಗಳು ಜೂಜುಕೋರರ ಉಪಟಳದಿಂದ ನಲುಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ಇಸ್ಪೀಟ್, ಮಟ್ಕಾ, ಬೆಟ್ಟಿಂಗ್ ದಂಧೆಗೆ ಗ್ರಾಮೀಣ ಭಾಗದ ಯುವಜನರೇ ಹೆಚ್ಚು ದಾಸರಾಗುತ್ತಿದ್ದು, ಜೂಜಾಟಕ್ಕೆ ಬಲಿಯಾದ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೂಲಿ ಕಾರ್ಮಿಕರು ದಿನವಿಡೀ ಬೆವರು ಹರಿಸಿ ದುಡಿದ ಹಣವನ್ನು ಕ್ಷಣಾರ್ಧದಲ್ಲಿ ಜೂಜಿಗೆ ಬಳಸಿ ಖಾಲಿ ಕೈಯಲ್ಲಿ ಮನೆಗೆ ತೆರಳುವಂತಾಗಿದೆ. ಚಟಕ್ಕೆ ಬಿದ್ದ ಬಹುತೇಕರು ತೋಟ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಸಾಕಷ್ಟು ಉದಾಹರಣೆಗಳು ಇವೆ.

ಎಗ್ಗಿಲ್ಲದೇ ನಡೆಯುತ್ತಿರುವ ಜೂಜಾಟಕ್ಕೆ ಪೊಲೀಸರು ಕೂಡಲೇ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ನಿಟ್ಟಿನಲ್ಲಿ ಇಂದು ನಗರದ ಹೊರವಲಯದಲ್ಲಿರುವ ಕೆರೆಯಂಗಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಅಡ್ಡೆ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, 16 ಜೂಜುಕೋರರನ್ನ ಬಂಧಿಸಿದ್ದಾರೆ. ಆರೋಪಿಗಳಿಂದ ಜೂಜಿಗೆ ಇಡಲಾಗಿದ್ದ 13 ಸಾವಿರ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡೆಹಳ್ಳಿ, ಟಿ.ಹೊಸಹಳ್ಳಿ, ನೇರಳೆಗಟ್ಟ ಗ್ರಾಮದಲ್ಲಿ ಸಹ ಮಾರ್ಚ್ 8ರ ಶುಕ್ರವಾರದಂದು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದೆ, ದಾಳಿ ನೆಡೆಸಿದ ವೇಳೆ 13 ಸಾವಿರ ರೂಪಾಯಿಗೆ ಅಂದರ್ ಬಾಹರ್ ಆಡುತ್ತಿದ್ದು ಕಂಡು ಬಂದಿದೆ. ಜೂಜಿನಲ್ಲಿ ತೊಡಗಿದ್ದ ಒಟ್ಟು 16 ಮಂದಿಯನ್ನ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗ್ರಾಮಾಂತರ ಪ್ರದೇಶದ ಜೂಜು ಅಡ್ಡೆಗಳ‌ ಮೇಲೆ ಪೊಲೀಸರು ನಿಯಮಿತವಾಗಿ ದಾಳಿ ನಡೆಸಿದರೂ ತಹಬದಿಗೆ ಬಂದಿಲ್ಲ. ಪರಿಣಾಮಕಾರಿ ಗಸ್ತು ವ್ಯವಸ್ಥೆ ಮಾಡಿದರೆ ಸಾಕಷ್ಟು ಕುಟುಂಬಗಳು ಬಚಾವಾಗಲಿವೆ ಎಂಬುದು ಗ್ರಾಮೀಣ ಭಾಗದ ಜನರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *