ಜು.2ರಂದು ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ:  ಜೂ.30ರಿಂದ ಜು.3ರವರೆಗೆ ನಂದಿಬೆಟ್ಟ‌ ಹಾಗೂ ಸ್ಕಂದಗಿರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಜು. 2ರಂದು ರಂದು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯನ್ನು ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳವಾದ ನಂದಿಗಿರಿಧಾಮ ಠಾಣಾ ವ್ಯಾಪ್ತಿಯ ನಂದಿ ಬೆಟ್ಟದಲ್ಲಿ ಆಯೋಜನೆ ಮಾಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿರುತ್ತದೆ.

ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಎಲ್ಲಾ ಮಂತ್ರಿಗಳು, ಶಾಸನ ಸಭಾ ಹಾಗೂ ವಿಧಾನಸಭಾ ಸದಸ್ಯರು, ಇಲಾಖಾ ಮುಖ್ಯಸ್ಥರು ಹಾಗೂ ಇತರೆ ಗಣ್ಯರು ಆಗಮಿಸಲಿದ್ದಾರೆ.

ನಂದಿಬೆಟ್ಟದಲ್ಲಿ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಅತಿ ಕಷ್ಟಕರವಾಗಿರುತ್ತದೆ ಹಾಗೂ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜೂ.30ರ ಬೆಳಿಗ್ಗೆ 6:00 ಗಂಟೆಯಿಂದ ಜು.3ರ ಮಧ್ಯಾಹ್ನ 2:00 ಗಂಟೆಯವರಿಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಿದೆ. ನಂದಿ ಬೆಟ್ಟದ ಮೇಲೆ ವಸತಿ ಕೊಠಡಿಗಳನ್ನು ಸಾರ್ವಜನಿಕರಿಗೆ ಮುಂಗಡವಾಗಿ ಕಾಯ್ದಿರಿಸುವಿಕೆಯನ್ನು ನಿಷೇಧಿಸಲಾಗಿದೆ.

ಇದೇ ವೇಳೆ ನಂದಿ ಬೆಟ್ಟದ ಸಮೀಪವಿರುವ ಸ್ಕಂದಗಿರಿ ಬೆಟ್ಟಕ್ಕೆ ಪ್ರತಿ ದಿನ ಹೆಚ್ಚು ಚಾರಣಿಗರು ಮತ್ತು ಪ್ರವಾಸಿಗರು ಬರುತ್ತಿರುವುದರಿಂದ ಗಣ್ಯರ ಭದ್ರತಾ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜೂ.30ರ ಬೆಳಿಗ್ಗೆ 6:00 ಗಂಟೆಯಿಂದ ಜು.3ರ ಮಧ್ಯಾಹ್ನ 2:00 ಗಂಟೆಯವರೆಗೆ ಸ್ಕಂದಗಿರಿ ಬೆಟ್ಟಕ್ಕೆ ಹೋಗುವ ಚಾರಣೆಗರು ಮತ್ತು ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *