ಭಾರತ್ ಬಂದ್…….
ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ……..
ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ ಹಿಂದೆ ಹೀಗೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ ಬಹುತೇಕ ಬಂದ್ ಆಚರಿಸಲಾಗುತ್ತಿತ್ತು. ಸಣ್ಣಪುಟ್ಟ ಗ್ರಾಮಗಳಲ್ಲಿ ಸಹ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ ಬೃಹತ್ ಮೆರವಣಿಗೆ ಘೋಷಣೆಗಳು ನಡೆಯುತ್ತಿದ್ದವು. ಜನರ ಪ್ರತಿಕ್ರಿಯೆ ಅದ್ಭುತವಾಗಿರುತ್ತಿತ್ತು. ವಾಹನ ಸಂಚಾರ ಸಂಪೂರ್ಣ ನಿಂತು ರಸ್ತೆಗಳು ಭಣಗುಡುತ್ತಿದ್ದವು. ಬೀದಿಗಳಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಲ್ಲಿ ಒಂದಷ್ಟು ಗಲಭೆ, ಬೆಂಕಿ, ಹಿಂಸಾಚಾರ, ಲಾಠಿಚಾರ್ಜ್, ಅಶ್ರುವಾಯು, ಗೋಲಿಬಾರ್ ನಡೆಯುತ್ತಿದ್ದವು. ಸರ್ಕಾರಗಳು ನಡುಗುತ್ತಿದ್ದವು.
ಆದರೆ, 2025 ರ ಜುಲೈ 9 ರ ಈ ಬಂದ್ ಇಷ್ಟೊಂದು ಸಂಪರ್ಕ ಕ್ರಾಂತಿಯ ನಡುವೆಯೂ ಎಷ್ಟೋ ಜನರಿಗೆ ಗೊತ್ತೇ ಆಗಲಿಲ್ಲ. ಮಾಧ್ಯಮಗಳು ಪ್ರಚಾರವನ್ನೂ ಕೊಡಲಿಲ್ಲ.
ಕಾರಣ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿರುವುದೇ ಅಥವಾ ಕಾರ್ಮಿಕರೇ ಇಲ್ಲವಾಗಿರುವುದೇ ಅಥವಾ ಕಾರ್ಮಿಕರಿಗೆ ಸಮಸ್ಯೆಗಳೇ ಇಲ್ಲವೇ ಅಥವಾ ಕಾರ್ಮಿಕರ ಬೇಡಿಕೆಗಳು ತೂಕ ಕಳೆದುಕೊಂಡವೇ ಅಥವಾ ಕೇವಲ ರಾಜಕೀಯ ಉದ್ದೇಶ ಮಾತ್ರವೇ ಅಥವಾ ಕಾರ್ಮಿಕರಿಗೆ ಸಮಯವಿಲ್ಲವೇ ಅಥವಾ ಕಾರ್ಮಿಕರು ಪ್ರಶ್ನಿಸುವ ಮನೋಭಾವ ಕಳೆದುಕೊಂಡರೇ ಅಥವಾ ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕಲಾಗಿದೆಯೇ ಹೀಗೆ ಅನೇಕ ಪ್ರಶ್ನೆಗಳು ಕಾಡತೊಡಗಿವೆ.
ಸಮಸ್ಯೆಗಳು 30 ವರ್ಷಗಳ ಹಿಂದಿಗಿಂತ ಈಗ ಇನ್ನೂ ಹೆಚ್ಚಾಗಿದೆ ಮತ್ತು ಸಂಕೀರ್ಣವಾಗಿದೆ. ಆದರೆ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಕಾರ್ಮಿಕ ವರ್ಗವನ್ನು ನಿರ್ವೀರ್ಯಗೊಳಿಸಿದೆ, ಗುಲಾಮಿತನಕ್ಕೆ ದೂಡಿದೆ. ಜೀತದಾಳುಗಳಂತೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದೆ. ಅದು ಅವರ ಅರಿವಿಗೆ ಬಾರದೆ ನಡೆಯುತ್ತಿದೆ. ಕಾರ್ಮಿಕರಿಗೆ ಆರ್ಥಿಕ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಅದನ್ನು ರಾಜಕಾರಣಿಗಳು ಖಾಸಗಿಕರಣದ ಮುಖಾಂತರ ಉತ್ಕೃಷ್ಟ ಸೇವೆ ಎಂಬ ಭ್ರಮೆಗೊಳಪಡಿಸಿ ಕಾರ್ಮಿಕರನ್ನು ತಮ್ಮ ನಿಯಂತ್ರಣಕ್ಕೆ ಪಡೆದಿದ್ದಾರೆ. ಕಾರ್ಮಿಕರಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮನಸ್ಸನ್ನೇ ಇಲ್ಲವಾಗಿಸಿದೆ. ಜಾತಿ, ಧರ್ಮ, ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಮಿಕರ ಸಂವೇದನಶೀಲತೆಯನ್ನೇ ಕೊಲ್ಲಲಾಗಿದೆ. ಅವರ ಯೋಚನಾ ಶಕ್ತಿಯನ್ನೇ ಹತ್ಯೆ ಮಾಡಲಾಗಿದೆ.
ಸಾಮಾನ್ಯ ಜನರಂತು ಈ ರೀತಿಯ ಹೋರಾಟಗಳಲ್ಲಿ ಭಾಗವಹಿಸುವುದನ್ನೇ ಮರೆತಿದ್ದಾರೆ. ಅವರಿಗೆ ತನ್ನ ಮನೆ, ಕುಟುಂಬ, ಮೊಬೈಲ್, ಮನರಂಜನೆ, ಉತ್ಸವ, ಜಾತ್ರೆಗಳು, ಸಭೆ ಸಮಾರಂಭಗಳು ಇಷ್ಟಕ್ಕೇ ಸೀಮಿತಗೊಳಿಸಲಾಗಿದೆ. ಮೊದಲು ಬಸ್ ದರ, ಸೀಮೆಎಣ್ಣೆ, ಪೆಟ್ರೋಲ್ ಮುಂತಾದ ವಿಷಯಗಳಿಗೇ ದೊಡ್ಡ ಪ್ರತಿಭಟನೆಗಳು ನಡೆಯುತ್ತಿದ್ದವು.
ಕಾರ್ಮಿಕ ಸಂಘಗಳ ದೌರ್ಬಲ್ಯಗಳು ಅವು ಜನಪ್ರಿಯತೆ ಕಳೆದುಕೊಳ್ಳಲು ಒಂದು ಅತೀ ಮುಖ್ಯ ಕಾರಣವಾಗಿರುವುದು ನಿಜ. ಆ ಸಂಘಟನೆಗಳ ನಾಯಕರು ನಿಂತ ನೀರಾಗಿ, ಬದಲಾವಣೆ ಬಯಸದೆ ಒಂದು ರೀತಿ ಹಳೆಯ ಸಿದ್ದಾಂತಗಳಿಗೆ ಕಟ್ಟುಬಿದ್ದು, ಹಠಮಾರಿತನದಿಂದ ಆಧುನಿಕ ಜಗತ್ತಿನ ಪರಿವರ್ತನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಕಣ್ಣಿಗೆ ಕಾಣಿಸುವ ವಾಸ್ತವ.
ಆದರೆ ಅದೇ ನೆಪವಾಗಿ ಕಾರ್ಮಿಕರ ಹಿತಾಸಕ್ತಿಯನ್ನು ಬಯಸುವ ಉದ್ದೇಶವನ್ನು ಕಡೆಗಣಿಸುವುದು ಕಾರ್ಮಿಕರ ಹಿತದೃಷ್ಟಿಯಿಂದಲೇ ಒಳ್ಳೆಯದಲ್ಲ. ಅವರಿಗೆ
ಸದಾ ಕಾಲ ಬೆಂಬಲವಾಗಿ ನಿಲ್ಲಬೇಕಾಗಿದ್ದು ಸಾಮಾನ್ಯ ಜನರ ಕರ್ತವ್ಯ. ಏಕೆಂದರೆ ರೈತರೆಂಬ ಅನ್ನದಾತರ ನಂತರ ನಮ್ಮ ದೇಶದ ಅಭಿವೃದ್ಧಿಯಲ್ಲಿ ಶ್ರಮಜೀವಿಗಳೆಂಬ ಕಾರ್ಮಿಕರು ತುಂಬಾ ಮುಖ್ಯರಾಗುತ್ತಾರೆ. ಜೊತೆಗೆ ಕಾರ್ಮಿಕ ವರ್ಗ ಈ ದೇಶದ ಬಹು ಸಂಖ್ಯಾತ ಮಧ್ಯಮ ವರ್ಗವನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಸರ್ಕಾರಗಳ ಮಿತಿಮೀರಿದ ಅಧಿಕಾರ ದಾಹ, ಅಹಂಕಾರ, ಜನವಿರೋಧಿ ನೀತಿಗಳನ್ನು ಎದುರಿಸಲು ಕಾರ್ಮಿಕ ಸಂಘಟನೆಗಳು ಬಲಿಷ್ಠವಾಗಿರುವುದು ಅತ್ಯವಶ್ಯಕ. ಸಾಮಾನ್ಯ ಜನರಿಗೆ ಒಂದು ಒಕ್ಕೂಟವಾಗಿ ಪ್ರತಿಭಟಿಸುವ ವೇದಿಕೆಗಳು ಇರುವುದಿಲ್ಲ. ಆದರೆ ಆ ಶಕ್ತಿ ಸಂಘಟನೆಗಳಿಗೆ ಇರುತ್ತದೆ. ಅವು ದುರ್ಬಲವಾಗಬಾರದು.
ಖಾಸಗೀಕರಣ ಮಿತಿ ಮೀರಿದರೆ ಇಡೀ ವ್ಯವಸ್ಥೆ ಮುಖ್ಯವಾಗಿ ಮಧ್ಯಮ ವರ್ಗ ದೊಡ್ಡ ಬೆಲೆ ತೆರಬೇಕಾಗುತ್ತದೆ.
ಮಾಧ್ಯಮಗಳು ಸಹ ಈ ವಿಷಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ. ಏಕೆಂದರೆ ಇಂದು ಮಾಧ್ಯಮಗಳು ಸಹ ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿ ಖಾಸಗಿ ಶಾಲೆಯ ಶಿಕ್ಷಕರು, ವೈದ್ಯರುಗಳು ಮತ್ತು ಐಟಿಬಿಟಿ ಕಂಪನಿಯ ಉದ್ಯೋಗಿಗಳಂತೆ ಪತ್ರಕರ್ತರು ಸಹ ಜೀತದಾಳುಗಳಂತೆ ತಮ್ಮ ಸ್ವಾಭಿಮಾನವನ್ನು ಅಡವಿಟ್ಟು, ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಕಾರ್ಮಿಕ ಸಂಘಟನೆಗಳು ದುರ್ಬಲವಾಗಿರುವುದೇ ಕಾರಣ.
ಬಂದ್ ಎಂಬುದು ಒಂದು ಸಾಂಕೇತಿಕ ಪ್ರತಿಭಟನೆ ಮಾತ್ರ. ಅದರಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಸಾಮಾನ್ಯ ಜನರಿಗೆ ಒಂದಷ್ಟು ತೊಂದರೆಯಾಗುತ್ತದೆ. ಆಧುನಿಕ ಕಾಲದಲ್ಲಿ ಬಂದ್ ಗಳ ಅವಶ್ಯಕತೆ ಅಷ್ಟೊಂದು ಇಲ್ಲ. ಆದರೆ ಜನಾಕ್ರೋಶವನ್ನು ಸಾಮೂಹಿಕವಾಗಿ ವ್ಯಕ್ತಪಡಿಸಲು ಇದು ಒಂದು ವೇದಿಕೆಯಾಗುತ್ತದೆ. ಜನಾಭಿಪ್ರಾಯ ರೂಪಿಸಲು ಬಂದ್ ಒಂದು ವಿಧಾನ. ಇದನ್ನು ಅಸ್ತ್ರವಾಗಿ ಉಪಯೋಗಿಸಿಕೊಂಡು ಸರ್ಕಾರಗಳನ್ನು ನಿಯಂತ್ರಿಸಲು, ಸರ್ಕಾರಗಳೊಂದಿಗೆ ಮಾತುಕತೆ ನಡೆಸಲು, ತಮ್ಮ ಬೇಡಿಕೆ ಪೂರೈಸಿಕೊಳ್ಳಲು ಬಂದ್ ಅನ್ನು ಉಪಯೋಗಿಸಿಕೊಳ್ಳಬೇಕು. ಆದ್ದರಿಂದ ಕಾರ್ಮಿಕರ ಒಗ್ಗೂಡುವಿಕೆಯ ಮುಖಾಂತರ ಬಲಿಷ್ಠತೆಯನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ