ಕಥೆಯೋ, ಕಾಲ್ಪನಿಕವೋ,
ವಾಸ್ತವವೋ, ನಿಮ್ಮ ವಿವೇಚನೆಗೆ ಬಿಡುತ್ತಾ…….
ಆಗ ನಾನು ತುಂಬಾ ಬಸವಳಿದಿದ್ದೆ. ಹಣಕಾಸಿನ ವ್ಯವಹಾರ ನೆಲಕಚ್ಚಿತ್ತು. ನಗರದಲ್ಲಿ ಇರಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಉಂಟಾಗಿತ್ತು. ಪೋಲೀಸರ ಕಾಟ, ಸಾಲಗಾರರ ಕಿರುಕುಳ, ಸ್ನೇಹಿತರ ಕೊಂಕು ನುಡಿಗಳು ನನ್ನನ್ನು ಹೈರಾಣ ಮಾಡಿದ್ದವು.
ಮೊದಲಿಗೆ ಶ್ರೀಮಂತನಾಗಿದ್ದ ನಾನು ತೀರಾ ಕೆಳಮಟ್ಟಕ್ಕೆ ಕುಸಿದಿದ್ದೆ. ಊಟ ತಿಂಡಿಯ ಸಮಸ್ಯೆಯೇ ದೊಡ್ಡದಾಯಿತು. ಒಂದು ಬ್ಯಾಗಿಗೆ ಕೆಲವು ಬಟ್ಟೆ ಮತ್ತು ಅವಶ್ಯಕ ವಸ್ತುಗಳನ್ನು ತುಂಬಿಕೊಂಡು ಇದ್ದ ಸ್ವಲ್ಪವೇ ಹಣ ಇಟ್ಟುಕೊಂಡು ಬಸ್ ಸ್ಟ್ಯಾಂಡಿಗೆ ಬಂದೆ.
ಎಲ್ಲಿಗೆ ಹೋಗುವುದೋ ತಿಳಿಯಲಿಲ್ಲ. ಕೊನೆಗೆ ಒಂದು ಪ್ರಖ್ಯಾತ ಮಠ ಇದ್ದ, ಉಚಿತ ಊಟಕ್ಕೆ ಹೆಸರಾಗಿದ್ದ ಊರಿನ ಬಸ್ ಬಂದಿತು..ಬಸ್ ಹತ್ತಿದೆ.
ಬೆಳಗ್ಗೆ ಆ ಸ್ಥಳ ತಲುಪಿದೆ. ಅಲ್ಲಿಯೇ ಹೊಳೆಯಲ್ಲಿ ಮುಖತೊಳೆದು ಅನ್ನ ಛತ್ರದ ಬಗ್ಗೆ ವಿಚಾರಿಸಿದೆ. ಮಧ್ಯಾಹ್ನ 12 ರ ನಂತರ ಊಟ ಎಂದರು. ಅಲ್ಲೇ ಸ್ವಲ್ಪ ಹೊತ್ತು ಮರದ ಕೆಳಗೆ ಮಲಗಿದೆ.
12/30 ರ ಸುಮಾರಿಗೆ ಅನ್ನ ಛತ್ರದ ಬಳಿ ಬಂದೆ. ಅದಾಗಲೇ ಎರಡು ದೊಡ್ಡ ಸರತಿ ಸಾಲು ಇತ್ತು. ಭಕ್ತಾದಿಗಳು ತುಂಬಿ ತುಳುಕುತ್ತಿದ್ದರು. ಕಡಿಮೆ ಜನರಿದ್ದ ಕ್ಯೂನಲ್ಲಿ ನಿಂತೆ. ಅರ್ಧ ಗಂಟೆಗೆಲ್ಲಾ ಊಟದ ಮನೆಯಲ್ಲಿ ಕುಳಿತೆ.
ನೋಡಿದರೆ ಗಂಡಸರೆಲ್ಲಾ ಷರಟು ಬನಿಯನ್ ಕಳಚಿ ಬರಿಮೈಯಲ್ಲಿ ಕುಳಿತಿದ್ದರು. ನಾನು ಷರಟು ಮತ್ತು ಪ್ಯಾಂಟಿನಲ್ಲಿದ್ದೆ. ಯಾರೋ ಒಬ್ಬ ಓಡಿ ಬಂದು ಷರಟು ಬಿಚ್ಚಿರಿ ಎಂದು ಗದರಿಸಿದ. ಹೊಟ್ಟೆ ಹಸಿವಾಗಿದ್ದರಿಂದ ನಾನೂ ಪ್ರತಿಯಾಡದೆ ಷರಟು ಬಿಚ್ಚಿದೆ. ನನ್ನ ಕರಿಯ ಬಣ್ಣದ ಬರಿಮೈ ನೋಡಿದ ಅವನು ಮತ್ತು ಇನ್ನೊಬ್ಬ ದಡಿಯ ಓಡಿ ಬಂದು ನನ್ನ ಕತ್ತು ಹಿಡಿದು ದರದರನೆ ಹೊರಗೆ ಎಳೆದು ತಂದು ಆಚೆಗೆ ನೂಕಿಬಿಟ್ಟರು.
ನನಗೆ ಅರ್ಥವೇ ಆಗಲಿಲ್ಲ ನಾನು ಮಾಡಿದ ತಪ್ಪೇನೆಂದು. ಕೇಳುತ್ತಿದ್ದರೂ ಅವರು ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಅವಮಾನದಿಂದ ಜರ್ಝರಿತನಾದ ನಾನು ಅಲ್ಲಿಯೇ ಇದ್ದ ಕೂಲಿಯವನನ್ನು ಕೇಳಿದೆ. ಆಗ ಆತ ಹೇಳಿದ ವಿಷಯ ಕೇಳಿ ಬೆಚ್ಚಿಬಿದ್ದೆ. ನಾನು ಜನಿವಾರವೆಂಬ ದಾರ ಧರಿಸಿರಲಿಲ್ಲ ಎಂಬ ಒಂದು ಕಾರಣಕ್ಕೆ ಹೊರಹಾಕಲಾಗಿದ್ದು ಜನಿವಾರ ಇಲ್ಲದವರು ಇನ್ನೊಂದು ಕ್ಯೂನಲ್ಲಿ ಹೋಗಿ ಊಟ ಮಾಡಬೇಕಿತ್ತು.
ಆ ಕ್ಷಣದಲ್ಲಿ ಹಸಿವು ತುಂಬಾ ಹೆಚ್ಚಾಗಿದ್ದರಿಂದ ಏನೂ ಯೋಚಿಸದೆ ಆ ಸಾಮಾನ್ಯ ಜನರ ಕ್ಯೂನಲ್ಲಿ ನಿಂತು ಹೊಟ್ಟೆ ತುಂಬಾ ಊಟ ಮಾಡಿದೆ.
ಆದರೆ ಆ ದಾರದ ಅವಮಾನ ಮನಸ್ಸನ್ನು ಕೊರೆಯುತ್ತಿತ್ತು. ಆ ರಾತ್ರಿ ಮಠದ ಆವರಣದಲ್ಲಿಯೇ ಒಂದು ಟವೆಲ್ ಹಾಸಿಕೊಂಡು ಇತರ ಪ್ರವಾಸಿಗರ ಜೊತೆಯಲ್ಲಿಯೇ ಮಲಗಿದೆ. ನಿದ್ದೆ ಬರಲಿಲ್ಲ. ನಾನೂ ಆ ದಾರದ ಜನರ ಜೊತೆ ಕುಳಿತು ಊಟ ಮಾಡಬೇಕೆಂಬ ಹಠ ಹುಟ್ಟಿತು. ನಾನು ಮೂಲತ: ಬಡವನಾಗಿರಲಿಲ್ಲ, ಪರಿಸ್ಥಿತಿಯ ಒತ್ತಡದಿಂದ ತಾತ್ಕಾಲಿಕವಾಗಿ ಈ ಸ್ಥಿತಿ ತಲುಪಿದ್ದೆ.
ಬೆಳಗ್ಗೆ ಎದ್ದವನೇ ಗುರುತು ಸಿಗಬಾರದೆಂದು ತಲೆ ಬೋಳಿಸಿ ಹೊಳೆಯಲ್ಲಿ ಸ್ನಾನ ಮಾಡಿ ಬ್ಯಾಗಿನಲ್ಲಿ ತಂದಿದ್ದ ಬಿಳಿಯ ಪಂಚೆ ಧರಿಸಿದೆ. ಮೇಲೆ ಒಂದು ಷರ್ಟು ಹಾಕಿಕೊಂಡು ಒಂದು ಗ್ರಂಧಿಗೆ ಅಂಗಡಿಗೆ ಹೋಗಿ, ಸ್ನಾನ ಮಾಡುವಾಗ ನನ್ನ ಜನಿವಾರ ನೀರಿನಲ್ಲಿ ಕೊಚ್ಚಿಹೋಯಿತು ಇನ್ನೊಂದು ಕಡಿಮೆ ಬೆಲೆಯ ಜನಿವಾರ ಕೊಡಿ ಎಂದೆ. ಆತ ಕೊಟ್ಟ ದಾರದ ಬೆಲೆ ಕೇವಲ 50 ರೂಪಾಯಿ. ಅದನ್ನು ತೆಗೆದುಕೊಂಡು ದೇವಸ್ಥಾನದ ರಥದ ಬಳಿ ಹೋಗಿ ಅಲ್ಲಿದ್ದ ಅರಿಶಿನ, ಕುಕುಮ, ವಿಭೂತಿಯನ್ನು ಅದಕ್ಕೆ ಬಳಿದು ಪವಿತ್ರಗೊಳಿಸಿದೆ. ಅಲ್ಲಿಯೇ ನಿಂತಿದ್ದ ನಾಮ ಬಳಿಯುವವನ ಬಳಿ ಹೋಗಿ 10 ರೂಪಾಯಿ ಕೊಟ್ಟು ನಾಮ ಬಳಿದುಕೊಂಡೆ.
ಯಾರಿಗೂ ಕಾಣದಂತೆ ಮರೆಯಲ್ಲಿ ಷರಟು ಬಿಚ್ಚಿ ದಾರವನ್ನು ಅಡ್ಡಡ್ಡ ಕತ್ತಿಗೆ ಹಾಕಿಕೊಂಡೆ. ಇಷ್ಟೊತ್ತಿಗಾಗಲೇ ಮಧ್ಯಾಹ್ನ 1 ಗಂಟೆಯಾಗಿತ್ತು. ನಿನ್ನೆ ಆಚೆ ತಳ್ಳಿದ ಕ್ಯೂನಲ್ಲಿಯೇ ಮತ್ತೆ ನಿಂತೆ. ಅವರು ಹೇಳುವ ಮೊದಲೇ ಷರಟು ಬಿಚ್ಚಿ ದಾರ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಿದೆ. ಯಾರಿಗೂ ಗುರುತು ಸಿಗಲಿಲ್ಲ. ಮಾಮೂಲಿನಂತೆ ಸರತಿಯಲ್ಲಿ ಕುಳಿತು ಭರ್ಜರಿ ಊಟ ಮಾಡಿದೆ. ಅಲ್ಲಿಗೂ ಇಲ್ಲಿಗೂ ಊಟದಲ್ಲಿ ಅಂತಹ ವ್ಯತ್ಯಾಸ ಇಲ್ಲದಿದ್ದರೂ ಎರಡು ರೀತಿಯ ಸಿಹಿ ಇಲ್ಲಿತ್ತು. ಪಾಯಸ ಮತ್ತು ಇನ್ನೊಂದು. ಹೆಸರು ಗೊತ್ತಿಲ್ಲ.
ಊಟದ ನಂತರ ಹೊರಗೆ ಬಂದು ನನ್ನ ಸಾಧನೆಗೆ ಹೆಮ್ಮೆ ಪಟ್ಟೆ. ಅಲ್ಲೇ ಮರದ ಕೆಳಗೆ ಕುಳಿತೆ. ಯಾಕೋ ಕಾರಣವೇ ಇಲ್ಲದೆ ಇದ್ದಕ್ಕಿದ್ದಂತೆ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿತು. ಎಷ್ಟೇ ನಿಯಂತ್ರಿಸಿ ಕೊಂಡರು ದುಃಖ ಉಕ್ಕಿ ಉಕ್ಕಿ ಬರುತ್ತಿತ್ತು. ನನ್ನ ಕರಿಯ ದೇಹವನ್ನೂ, ಅರಿಶಿನ ಕುಂಕುಮ ಲೇಪಿತ ದಾರವನ್ನೂ ನೋಡತೊಡಗಿದೆ.
ಜೀವವಿರುವ ಈ ದೇಹಕ್ಕಿಂತ ದಾರವೇ ಮುಖ್ಯವಾಯಿತೆ. ಹಾಗಾದರೆ ನಾನೇನು.?.
ಉತ್ತರಿಸುವವರು ಯಾರೂ ಇರಲಿಲ್ಲ. ನಾನೇ ಸಮಾಧಾನ ಮಾಡಿಕೊಂಡು ಹೊಳೆಯತ್ತ ಹೆಜ್ಜೆ ಹಾಕಿದೆ.
ಈ ವ್ಯವಸ್ಥೆಯನ್ನು ಮಾಡಿದ್ದು ಯಾರು ?
ಏಕೆ ? ಹೋಗಲಿ ಈಗಲೂ ಅದನ್ನು ಮುಂದುವರಿಸಿಕೊಂಡು ಬರುತ್ತಿರುವವರು ಯಾರು ? ಏಕೆ ? ಇದಕ್ಕೆ ದೇವರು ಏನೂ ಮಾಡುತ್ತಿಲ್ಲವೇ ? ಕಾನೂನು ಏನು ಹೇಳುತ್ತಿಲ್ಲವೇ ? ಆಧುನಿಕತೆ ಮತ್ತು ನಾಗರಿಕತೆಯಲ್ಲಿ ಇದಕ್ಕೆ ಸೂಕ್ತ ಪರಿಹಾರ ಇಲ್ಲವೇ ? ಕಾಡುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.
ಕಥೆ ಇನ್ನೂ ಮುಂದುವರಿಯುತ್ತಲೇ ಇದೆ.
ಮುಕ್ತಾಯ ಎಂದೋ ಅಥವಾ ಇದು ಮುಗಿಯದ ವ್ಯಥೆಯೋ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್.ಕೆ