ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಂಡ ಪ್ರತಿಯೊಬ್ಬರು ಯಶಸ್ಸನ್ನು ಕಾಣಲು ಸಾಧ್ಯ ಹಾಗೂ ಕೌಶಲ್ಯದ ಕಲಿಕೆಯೊಂದಿಗೆ ಉದ್ಯಮಿಗಳಾಗಲು ಸ್ವಪ್ರೇರಣೆಯು ಅತ್ಯಗತ್ಯ ಎಂದು ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪೂರ್ ಅವರು ಶಿಬಿರಾರ್ಥಿಗಳಿಗೆ ತಿಳಿಸಿದರು.
ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಕಂಪ್ಯೂಟರ್ ಡಿಟಿಪಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಅವರು ಮಾತನಾಡಿದರು.
ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಂಡು, ಸಮಾಜಕ್ಕೆ ಹೊರೆಯಾಗದಂತೆ ನಮ್ಮ ಹೊಣೆಗಾರಿಕೆಯನ್ನು ಅರಿತು ಜವಾಬ್ಧಾರಿಯುತ ನಾಗರಿಕರಾಗುವುದರೊಂದಿಗೆ ಸಮಾಜದ ಆಸ್ತಿಯಾಗಬೇಕೆಂದು ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಹಾಗೂ ಬ್ಯಾಂಕ್‌ನ ಮುಖ್ಯ ಪ್ರಬಂಧಕರಾದ ಮಧುಕರ್ ಅವರು ಮಾತನಾಡಿ, ಬ್ಯಾಂಕಿನ ವ್ಯವಹಾರದ ಕುರಿತು, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸ್ವ ಉದ್ಯೋಗಿಗಳಾಗಲು ಲಭ್ಯವಿರುವ ಸಾಲ ಸೌಲಭ್ಯಗಳ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು.
ರುಡ್‌ಸೆಟ್ ಸಂಸ್ಥೆಯ ಉಜಿರೆ ಶಾಖೆಯ ನಿರ್ದೇಶಕರಾದ ಸುರೇಶ್ ಅವರು ಮಾತನಾಡಿ, ತರಬೇತಿ ಪಡೆದ ತಾವು ಕೆಲಸ ಆರಂಭಿಸುವ ಮೂಲಕ ಕಲಿತ ಕೌಶಲ್ಯದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ಅವರು ಮಾತನಾಡಿ, ಸಂಸ್ಥೆಯ ಕುರಿತು ಹಾಗೂ ಸಂಸ್ಥೆಯಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಮಾಹಿತಿಯನ್ನು ಸಂಸ್ಥೆಯ ಶಿಬಿರಾರ್ಥಿಗಳಾದ ತಾವು ಸಾರ್ವಜನಿಕರಿಗೆ ತಿಳಿಸಬೇಕೆಂದರಲ್ಲದೆ, ಶಿಬಿರಾರ್ಥಿಗಳಿಗೆ ಶುಭಕೋರಿದರು.
ಸಮಾರೋಪ ಸಮಾರಂಭದಲ್ಲಿ ಕಂಪ್ಯೂಟರ್ ಡಿಟಿಪಿ ತರಬೇತಿಯ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕರಾದ ರವೀಂದ್ರ ಹಾಗೂ ವಿದ್ಯಾ ಹೊಸಮನಿ ಸೇರಿದಂತೆ ಕಂಪ್ಯೂಟರ್ ಡಿಟಿಪಿ ಹಾಗೂ ಟೈಲರಿಂಗ್ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.