
ಸುಮಾರು 8 ಗಂಟೆಯ ಹಿಂದೆ ಜನಿಸಿದ ಗಂಡು ಮಗುವನ್ನು ಅಪರಿಚಿತರು ಮಣ್ಣಿನಲ್ಲಿ ಜೀವಂತವಾಗಿ ಹೂತಿಟ್ಟಿರುವ ಘಟನೆ ಆನೇಕಲ್ ತಾಲ್ಲೂಕಿನ ನೆರಿಗೆ ಪಂಚಾಯಿತಿ ಕತ್ರಿಗುಪ್ಪೆ ದಿನ್ನೆ ಎಂಬ ಗ್ರಾಮದ ನೀಲಿಗಿರಿ ತೋಪಿನಲ್ಲಿ ಬೆಳಕಿಗೆ ಬಂದಿದೆ.
ಒಂದು ದಿನದ ನವಜಾತ ಗಂಡು ಶಿಶುವನ್ನು ಮಣ್ಣಿನಲ್ಲಿ ಹೂತು ಹಾಕಿರುವುದನ್ನ ಲಾರಿ ಚಾಲಕರು ಗಮನಿಸಿ, ಕೂಡಲೇ ಸರ್ಜಾಪುರ ಠಾಣಾ ವ್ಯಾಪ್ತಿಯ 112 ಸಿಬ್ಬಂದಿ, ಮಕ್ಕಳ ಸಹಾಯ ವಾಣಿ 1098 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ, ಹೂತಿಟ್ಟ ಮಗುವನ್ನು ಹೊರ ತೆಗೆದು, ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸೂಕ್ತ ಚಿಕಿತ್ಸೆಯಿಂದ ಮಗು ಸದ್ಯ ಆರೋಗ್ಯವಾಗಿದೆ. ಪೊಲೀಸರ ಉತ್ತಮ ಕಾರ್ಯಕ್ಕೆ ಪೊಲೀಸ್ ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸದ್ಯ ಮಗುವಿನ ತಂದೆ-ತಾಯಿ ಹಾಗೂ ಮಗುವನ್ನು ಹೂತಿಟ್ಟವರ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…..