ಜಿಲ್ಲೆಯಲ್ಲಿ 164 ಮಂದಿ ಜೀತ ಮುಕ್ತ- ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಿ- ಡಾ.ಕೆ.ಎನ್ ಅನುರಾಧ

ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿರುವ ಜೀತಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ “ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ:ಒಂದು ದಿನದ ಕಾರ್ಯಾಗಾರ”ವನ್ನು ಜೀತ ಪದ್ಧತಿ ನಿರ್ಮೂಲನೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಜೀತ ಪದ್ಧತಿಯು ಆಳವಾಗಿ ಬೇರೂರಿತ್ತು. ಸ್ವಾತಂತ್ರ್ಯಾನಂತರ ಈ ಪದ್ಧತಿ ಗಣನೀಯವಾಗಿ ಕಡಿಮೆಯಾಗಿದ್ದರೂ ಸಹ ಸಾಮಾಜಿಕ-ಆರ್ಥಿಕ ಅಸಮಾನತೆಗಳಿಂದಾಗಿ ಇಂದಿಗೂ ಜೀತ ಪದ್ಧತಿ ವ್ಯವಸ್ಥೆ ಜೀವಂತವಾಗಿದೆ.

ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಾಮಾನ ಹಕ್ಕುಗಳನ್ನು ನೀಡಲಾಗಿದೆ. ಬಲವಂತವಾಗಿ ಯಾರ ಸ್ವತಂತ್ರವನ್ನು ಕಿತ್ತು ಕೊಳ್ಳಬಾರದು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವು ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿಯಾಗಿದೆ ಎಂದರು.

ಶಿಕ್ಷಣದಿಂದ ಮಾತ್ರ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯ. ಜೀತ ಪದ್ಧತಿಯ ನಿರ್ಮೂಲನೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಜೀತ ಪದ್ದತಿಗೆ ಒತ್ತಾಯಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಎಲ್ಲಾದರೂ ಜೀತ ಪದ್ಧತಿ ವ್ಯವಸ್ಥೆ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ 164 ಜೀತದಾಳುಗಳನ್ನು ವಿಮುಕ್ತಿಗೊಳಿಸಲಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 157 ಜೀತ ವಿಮುಕ್ತರಿಗೆ ತಲಾ 20.000 ರೂ.ಗಳಂತೆ 31.40 ಲಕ್ಷ ರೂ.ಗಳು ನೀಡಲಾಗಿದೆ. ಇಬ್ಬರಿಗೆ ನಿವೇಶನ ನೀಡಲಾಗಿದ್ದು, 43 ಜನರಿಗೆ ಮನೆ ಒದಗಿಸಲಾಗಿದೆ. 53 ಜನರಿಗೆ ಜಾಬ್ ಕಾರ್ಡ್, 156 ಜನರಿಗೆ ಆಧಾರ್ ಹಾಗೂ ಮತದಾನ ಗುರುತಿನ ಚೀಟಿ, 112 ಜನರಿಗೆ ಬ್ಯಾಂಕ್ ಗಳಿಂದ ಸಾಲ ಧನಸಹಾಯ, 04 ಜನರಿಗೆ 79200 ರೂಗಳ ಮಾಸಾಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೀವಿಕ ಸಂಘಟನೆಯ ಡಾ.ನಾರಾಯಣಸ್ವಾಮಿ ರವರು ಮಾತನಾಡಿ ಜೀತ ಕಾರ್ಮಿಕ ಪದ್ಧತಿ (ರದ್ದತಿ) ಕಾಯ್ದೆ 1976 ಜೀತ ಪದ್ಧತಿ ವ್ಯಾಖ್ಯಾನ, ಜೀತ ಕಾರ್ಮಿಕ ಪದ್ದತಿಗೆ ಒತ್ತಾಯಿಸುವವರ ವಿರುದ್ಧ ಕಾಯ್ದೆಯಡಿ ನಿಗದಿಗೊಳಿಸಿರುವ ಕಾನೂನು ಶಿಕ್ಷೆ, ಜೀತ ವಿಮುಕ್ತರ ಪುನರ್ವಸತಿ ಯೋಜನೆ (RBL Scheme), ಜೀತ ಕಾರ್ಮಿಕರ ಗುರುತಿಸುವಿಕೆ, ರಕ್ಷಣೆ ಹಾಗೂ ಪುನರ್ವಸತಿ ಕುರಿತಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಮಾದರಿ ಕಾರ್ಯವಿಧಾನಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಡಿವೈಎಸ್ಪಿ ರವಿ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ, ಗ್ರಾಮ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!