ಕೋಲಾರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಅವರಿಗೆ ಶನಿವಾರ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶಾಸಕರ ಕಛೇರಿಯಲ್ಲಿ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ಕೋಲಾರ ಜಿಲ್ಲೆಯು ಬೆಂಗಳೂರಿಗೆ ತೀರಾ ಸಮೀಪವಿದ್ದು, ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದು ಬೆಂಗಳೂರಿಗೆ ಕೇವಲ 70 ಕಿ.ಮೀ. ಅಂತರದಲ್ಲಿರುವ ಜಿಲ್ಲೆಗೆ ವೈದ್ಯಕೀಯ ಕಾಲೇಜು ಇಲ್ಲದೇ ಇರುವುದು ಬಹಳ ನೋವಿನ ಸಂಗತಿ. ಜಿಲ್ಲೆಯ ಮಕ್ಕಳು ಪ್ರತಿಭಾವಂತರಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯಲು ದೂರದ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳು ಮತ್ತು ಹೊರದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ದುಬಾರಿ ವೆಚ್ಚದಲ್ಲಿ ಪಡೆಯುತ್ತಿರುವುದು ಪೋಷಕರಿಗೆ ಹೊರೆಯಾಗುತ್ತಿದೆ ಎಂದು ಆರೋಪಿಸಿದರು.
ಕೋಲಾರ ಜಿಲ್ಲೆಯು ಬರಗಾಲಪೀಡಿತ ಪ್ರದೇಶವಾಗಿದ್ದು, ಇಲ್ಲಿನ ಜನರು ಅಂತರ್ಜಲವನ್ನು ನೆಚ್ಚಿಕೊಂಡು ಕೃಷಿಯನ್ನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಸೌಲಭ್ಯಗಳುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಮ್ಮೊಮ್ಮೆ ರೋಗಿಯು ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿಯೇ ಪ್ರಾಣವನ್ನು ಕಳೆದುಕೊಳ್ಳುವ ಸಂದಿಗ್ಧ ಪರಿಸ್ಥಿತಿಯು ಉಂಟಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಹಿರಿಯ ದಲಿತ ಮುಖಂಡ ಟಿ ವಿಜಿಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಗೊಂಡರೆ ತಜ್ಞ ವೈದ್ಯರು, ನುರಿತ ಸಿಬ್ಬಂದಿ ಸೇರಿದಂತೆ ಸುಸಜ್ಜಿತ ಸೌಲಭ್ಯಗಳುಳ್ಳ ಆಸ್ಪತ್ರೆಯಿಂದ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಶಾಸಕರು ಎಂಎಲ್ಸಿ ಕೂಡಲೇ ಸರ್ಕಾರದ ಮೇಲೆ ಒತ್ತಡ ಹೇರಿ ಹಿಂದುಳಿದಿರುವ ಕೋಲಾರ ಜಿಲ್ಲೆಗೆ ಈ ವರ್ಷವೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆನಂದ್ ಕುಮಾರ್, ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ತುರಾಂಡಹಳ್ಳಿ ಶಂಬಪ್ಪ, ನಡುಪಳ್ಳಿ ವೆಂಕಟೇಶ್ ಮುಂತಾದವರು ಇದ್ದರು