ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ 30.03 ಹೆಕ್ಟೇರ್ ಬೆಳೆ ನಾಶ

ಜಿಲ್ಲೆಯಾದ್ಯಂತ 2023ರ ಮೇ.20 ರಿಂದ ಮೇ.23 ರವರೆಗೆ ಸುರಿದ ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಮುಂಗಾರು ಮಳೆ ಆರಂಭವಾಗುವ ಹಿನ್ನೆಲೆಯಲ್ಲಿ ಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್ ಲತಾ ಅವರು ಅಧಿಕಾರಿಗಳಿಗೆ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮುಂಗಾರು ಮಳೆ ಸನ್ನದ್ದತೆ ಕ್ರಮಗಳನ್ನು ಕೈಗೊಳ್ಳುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1.31 ಹೆಕ್ಟೇರ್ ಹಾಗೂ ಹೊಸಕೋಟೆ ತಾಲೂಕಿನಲ್ಲಿ 5.62 ಹೆಕ್ಟೇರ್ ಸೇರಿದಂತೆ ಒಟ್ಟು 6.93 ಹೆಕ್ಟೇರ್ ರಷ್ಟು ವಿರ್ಸೀರ್ಣದ ಕೃಷಿ ಬೆಳೆಯಾದ ಸ್ವೀಟ್ ಕಾರ್ನ್(ಸಿಹಿ ಮೆಕ್ಕೆಜೋಳ) ಬೆಳೆ ಹಾನಿಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು. ತೋಟಗಾರಿಕೆ ಬೆಳೆಗಳಾದ ಮಾವು 11.70 ಹೆಕ್ಟೇರ್, ಟೊಮ್ಯಾಟೋ 2 ಹೆಕ್ಟೇರ್, ಸೇವಂತಿಗೆ 5 ಹೆಕ್ಟೇರ್, ಬದನೆಕಾಯಿ 1.2 ಹೆಕ್ಟೇರ್ , ಹೀರೆ ಗಿಡ 1.28 ಹೆಕ್ಟೇರ್, ಬೀನ್ಸ್ 1.00 ಹೆಕ್ಟೇರ್ ವಿರ್ಸೀರ್ಣದ ಬೆಳೆಯು ಹಾನಿಯಾಗಿದೆ. ಉಳಿದಂತೆ ಎಲೆಕೋಸು, ಹೂಕೋಸು, ಚೆಂಡು ಹೂಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.

ಒಟ್ಟಾರೆ ಹೊಸಕೋಟೆ ತಾಲ್ಲೂಕಿನಲ್ಲಿ 17 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 6.10 ಹೆಕ್ಟೇರ್ ಒಟ್ಟು 23.10 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ತಿಳಿಸಿದರು.

ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಶೀಘ್ರವೇ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ದೊಡ್ಡಬಳ್ಳಾಪುರದಲ್ಲಿ ಒಂದು ಮನೆ ಸೇರಿದಂತೆ, ಶಾಲೆಯ ಮೇಲ್ಚಾವಣಿಗೆ ಅಲ್ಪ ಹಾನಿಯಾಗಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ಒಂದು ಮನೆಗೆ ಹೆಚ್ಚು ಪ್ರಮಾಣದ ಹಾನಿಯಾಗಿದೆ. ಉಳಿದಂತೆ ನೆಲಮಂಗಲ ಹಾಗೂ ದೇವನಹಳ್ಳಿಯಲ್ಲಿ ಯಾವುದೇ ರೀತಿಯ ಮನೆಗಳಿಗೆ, ಶಾಲೆಗಳಿಗೆ, ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿರುವುದಿಲ್ಲ ಎಂದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಮಾತನಾಡಿ ಹಾನಿಯಾದ ಮನೆ ಕಟ್ಟಡಗಳಿಗೆ ಶೀಘ್ರ ಪರಿಹಾರ ಹಾಗೂ ದುರಸ್ತಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹೆಚ್ಚು ಮಳೆ ಮತ್ತು ಗಾಳಿಯಿಂದ ನೆಲಮಂಗಲ ವ್ಯಾಪ್ತಿಯಲ್ಲಿ 41 ವಿದ್ಯುತ್ ಕಂಬಗಳು, 32 ಟ್ರಾನ್ಸಫಾರ್ಮರ್ಗಳು, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ 22 ವಿದ್ಯುತ್ ಕಂಬಗಳು, 26 ಟ್ರಾನ್ಸಫಾರ್ಮರ್ಗಳು, ಹೊಸಕೋಟೆ ವ್ಯಾಪ್ತಿಯಲ್ಲಿ 27 ವಿದ್ಯುತ್ ಕಂಬಗಳು, 03 ಟ್ರಾನ್ಸಫಾರ್ಮರ್ಗಳು ದೇವನಹಳ್ಳಿಯಲ್ಲಿ 25 ವಿದ್ಯುತ್ ಕಂಬಗಳು , 02 ಟ್ರಾನ್ಸಫಾರ್ಮರ್ಗಳು ಒಟ್ಟು 115 ವಿದ್ಯುತ್ ಕಂಬಗಳು ಹಾಗೂ 63 ಟ್ರಾನ್ಸಫಾರ್ಮರ್ಗಳಿಗೆ ಹಾನಿಯಾಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದಾಗ ನೆಲಕ್ಕೆ ಉರುಳಿರುವ ಕಂಬಗಳನ್ನು, ಟ್ರಾನ್ಸಫಾರ್ಮರ್ ಗಳನ್ನು ಬದಲಾಯಿಸಿ ವಿದ್ಯುತ್ ವ್ಯತ್ಯಯವಾಗದಂತೆ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!