ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಾರದೊಳಗೆ ಸಭೆ- ಡಿಸಿ ಭರವಸೆ: ಧರಣಿ ತಾತ್ಕಾಲಿಕ ಸ್ಥಗಿತ

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ವಿಷಯುಕ್ತ ತ್ಯಾಜ್ಯ ನೀರು ಅರ್ಕಾವತಿ ನದಿ ಪಾತ್ರದ ಕೆರೆಗಳ ಒಡಲು ಸೇರಿ ಅಂರ್ತಜಲ ಕಲುಷಿತಗೊಂಡಿದ್ದು,‌ ಕೆರೆಗಳ ಸೂಕ್ತ ಶುದ್ಧೀಕರಣಕ್ಕೆ ಕ್ರಮ ವಹಿಸದೇ ಇರುವುದನ್ನು ವಿರೋಧಿಸಿ ಹಾಗೂ 3ನೇ ಹಂತದ ಶುದ್ಧೀಕರಣ ಘಟಕಕ್ಕೆ ಒತ್ತಾಯಿಸಿ, ಅರ್ಕಾವತಿ ನದಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು.

ವಿಚಾರ ತಿಳಿದು ಸತ್ಯಾಗ್ರಹದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಮಾತನಾಡಿದರು.

ಈ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ  ಮುಖಂಡರು, ವಿಷಕಾರಿ ತ್ಯಾಜ್ಯ ನೀರು ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಯ ಒಡಲು ಸೇರಿದ್ದು, ಸುತ್ತಮುತ್ತಲಿನ ಎರಡು ಗ್ರಾಮ ಪಂಚಾಯಿತಿಯ 17 ಗ್ರಾಮಗಳ ಅಂತರ್ಜಲ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಈ ಬಗ್ಗೆ ನಾಲ್ಕು ವರ್ಷಗಳಿಂದಲು ಹಲವಾರು ಪ್ರತಿಭಟನೆ, ಮನವಿಗಳನ್ನು ನೀಡುತ್ತಲೇ ಬರುತ್ತಿದ್ದೇವೆ. ಇದರಿಂದ ಯಾವ ಪ್ರಯೋಜನವಾಗಿಲ್ಲ. ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದೆವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರು ಈ ಹಿಂದೆ ನೀಡಿದ್ದ ಭರವಸೆಗಳು ಈಡೇರಿಸಿಲ್ಲ. ನೀರು ಶುದ್ಧೀಕರಣಕ್ಕೆ ಸಂಬಂಸಿದಂತೆ 150 ಕೋಟಿ ರೂ. ಯೋಜನಾ ವರದಿಯ ಮಾಹಿತಿ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಇಂತಹ ಯಾವುದೇ ಯೋಜನೆಯು ನಮ್ಮ ಇಲಾಖೆಯ ಗಮನಕ್ಕೆ ಬಂದೇ ಇಲ್ಲ. ಆದರೆ, ಶುದ್ಧೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಉತ್ತರ ನೀಡಿದ್ದಾರೆ.

ಈಗ 3ನೇ ಶುದ್ಧೀಕರಣ ಘಟಕದ ಅಗತ್ಯವಿದೆ. ಈ ಹೇಳಿಕೆಗಳು ಗೊಂದಲ ಮೂಡಿಸುತ್ತಿವೆ. ಈ ಹಿಂದೆ ಭರವಸೆ ನೀಡಿದಂತೆ ಈ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ತೆರೆಸಿಲ್ಲ. ಮಳೆ ನೀರು ಕೊಯ್ಲು ಅಳವಡಿಕೆಗೆ ಅನುದಾನ ಬಿಡುಗಡೆಯಾಗಿಲ್ಲ. ನೂರಾರು ಕೈಗಾರಿಕೆಗಳಿರುವ ದೊಡ್ಡಬಳ್ಳಾಪುರಕ್ಕೆ ಮಾಲಿನ್ಯ ನಿಯಂತ್ರಣ ಮಂಡಲಿ ಕಚೇರಿ ಇದುವರೆಗೂ ಸ್ಥಳಾಂತರವಾಗಿಲ್ಲ. ಚೆನ್ನೈ ಹಸಿರು ನ್ಯಾಯಮಂಡಲಿ ನೀಡಿರುವ ನಿರ್ದೇಶನಗಳನ್ನು ಸಹ ಇಲ್ಲಿನ ಅಕಾರಿಗಳು ಪಾಲಿಸುತ್ತಿಲ್ಲ ಎಂದು ಕಿಡಿಕಾರಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಸದನದಲ್ಲಿ ಚರ್ಚೆಯಾಗಿರುವಂತೆ ನಗರಸಭೆ ಒಳಚರಂಡಿ ಕಾಮಗಾರಿಯ ಹೊಸ ಮಾರ್ಗಗಳು ಹಾಗೂ ನವೀಕರಣ ಹಾಗೂ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ ಸೇರಿ ಅಂದಾಜು 137 ಕೋಟಿ ರೂ.ಗಳ ಪ್ರಸ್ತಾವನೆಯಾಗಿದ್ದು, ಇದು ಬರೀ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ ಮಾತ್ರ ಎಂದು ಬಿಂಬಿತವಾಗಿದ್ದು, ತಪ್ಪು ಸಂದೇಶ ರವಾನೆಯಾಗಿದೆ ಎಂದು ತಿಳಿಸಿದರು.

ಇದು ಸಂವಹನ ಕೊರತೆಯಿಂದಾಗಿದೆ ಹೊರತು ಉದ್ದೇಶ ಪೂರ್ವಕವಲ್ಲ. ಈ ಬಗ್ಗೆ  ಚರ್ಚೆ ನಡೆಸಿದ್ದೇವೆ. ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ 57 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಎಸ್‌ಟಿಪಿ ಘಟಕಕ್ಕೆ ಜಾಗ ಸಹ ಗುರುತಿಸಲಾಗಿದೆ. ಈ ಹಿಂದೆ ಭರವಸೆ ನೀಡಿದಂತೆ ಕಾಮಗಾರಿಗಳು ವಿಳಂಬವಾಗಿರುವುದು ನಿಜ. ಆದರೆ, ಸ್ಥಗಿತವಾಗಿಲ್ಲ. ಕಾಡನೂರು ಬಳಿಯಿಂದ ಕೊಳವೆ ಬಾವಿಗಳ ಮೂಲಕ ನೀರುಣಿಸುವ 12 ಕೋಟಿ ರೂ.ಯೋಜನೆ ಸಹ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಮಳೆ ನೀರು ಕೊಯ್ಲು ಯೋಜನೆ ರೂಪಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಾರದೊಳಗೆ ಸಭೆ: 

ಕುಡಿಯುವ ನೀರು ನಮ್ಮ ಹಕ್ಕು. ಆದರೆ ನಮಗೆ ವಿಷ ನೀರು ಕುಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಸರ್ಕಾರದ ನಡುವೆ ಆಗಿರುವ ಪತ್ರ ವ್ಯವಹಾರದ ಮಾಹಿತಿ ನೀಡಿ, ನಮಗೆ ಸಮಾಧಾನವಾದರೆ ಮಾತ್ರ ಸತ್ಯಾಗ್ರಹ ಕೈಬಿಡುತ್ತೇವೆ.

ಸಂಬಂಧಪಟ್ಟ ಇಲಾಖೆಯ ಸಚಿವರು ತಮಗೆ ಅರಿವಿಲ್ಲ ಎಂದು ಹೇಳುತ್ತಿರುವುದರಿಂದ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶೀಘ್ರ ಸಭೆ ನಡೆಸಬೇಕು. ಶುದ್ಧೀಕರಣ ಘಟಕ ಸ್ಥಾಪನೆಗೆ ಸ್ಪಷ್ಟ ಭರವಸೆ ಬೇಕು. ಬಾಯಿ ಮಾತಿನ ಭರವಸೆಗಳು ನಮಗೆ ಬೇಡ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖಂಡರ ಸಭೆ ಕರೆದು, ಕಾಮಗಾರಿಗಳ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಇನ್ನೆರಡು ವಾರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲು ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಈ ವೇಳೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ತಾ.ಪಂ ಇಒ, ನಗರಸಭೆ ಪೌರಾಯುಕ್ತ, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Ramesh Babu

Journalist

Recent Posts

ಮಾರಕಾಸ್ತ್ರಗಳಿಂದ ಶಿಕ್ಷಕಿಯ ಕ್ರೂರ ಹತ್ಯೆ: ಕೊಲೆ ಬಳಿಕ ದುಷ್ಕರ್ಮಿಗಳಿಂದ ಶವಕ್ಕೆ ಬೆಂಕಿ

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…

51 minutes ago

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

2 hours ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

12 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

12 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

15 hours ago

ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…

17 hours ago