ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಎರಡು ವಾರಗಳ ಕಾಲ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಂಚರಿಸಿ, ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆಹಾನಿ ಸೇರಿದಂತೆ ಬರ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ, ವರದಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರಾಜ್ಯದ 236 ತಾಲೂಕುಗಳ ಪೈಕಿ ಇದುವರೆಗೆ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರ ಹಿನ್ನೆಲೆ ಜನ-ಜಾನುವಾರುಗಳಿಗೆ ನೀರು, ಮೇವು, ಕೃಷಿ-ಕೈಗಾರಿಕೆಗಳಿಗೆ ನೀರು, ಬೆಳೆ ಹಾನಿ, ಜನರ ಉದ್ಯೋಗದ ಸ್ಥಿತಿ, ಬರ ಪರಿಹಾರ ವಿತರಣೆ ಮುಂತಾದ ಬರ ನಿರ್ವಹಣಾ ಕ್ರಮಗಳನ್ನ ಕೈಗೊಳ್ಳವ ಕುರಿತು ಸಚಿವ ಸಂಪುಟ ಸಭೆಗಳಲ್ಲಿ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಅವರಿಗೂ ಹಲವು ಬಾರಿ ನಿರ್ದೇಶನ ನೀಡಲಾಗಿದೆ.
ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೆರಡು ವಾರದಲ್ಲಿ ತಮ್ಮ ತಮ್ಮ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆ ನಷ್ಟದ ಸ್ಥಿತಿಗತಿ ಪರಿಶೀಲಿಸಿ ಪರಿಸ್ಥಿಯನ್ನ ಅವಲೋಕಿಸಿ ಅಗತ್ಯ ಮಾಹಿತಿ ಸಂಗ್ರಹಿಸುವುದು ಹಾಗೂ ಸ್ಥಳೀಯ ಶಾಸಕರೊಂದಿಗೆ ಗೋಶಾಲೆ, ಮೇವು ಬ್ಯಾಂಕ್, ಕುಡಿಯುವ ನೀರು, ಉದ್ಯೋಗ ಸೃಷ್ಠಿ ಮುಂತಾದ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚಿಸಿ, ಅಗತ್ಯ ಇರುವ ಕಡೆ ಭೇಟಿ ನೀಡಿ ಪರಿಶೀಲಿಸುವುದು, ಬರ ನಿರ್ವಹಣೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ವೈಫಲ್ಯಗಳಾಗದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವುದು.