ಕೋಲಾರ: ನಗರದ ಎಸ್.ಎನ್ ಆರ್ ಜಿಲ್ಲಾಸ್ಪತ್ರೆಗೆ ಖಾಯಂ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ನೇಮಕ ಮಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಕ್ಕಳ ತಜ್ಞ ವೈದ್ಯ ಶ್ರೀನಾಥ್ ಅವರನ್ನು ಇಲ್ಲಿಯೇ ಮುಂದುವರೆಸಬೇಕೆಂದು ರೈತಸಂಘದಿಂದ ಆಸ್ಪತ್ರೆಯೆದುರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋರಾಟ ಮಾಡಿ ವೈದ್ಯಾಧಿಕಾರಿ ಡಾ.ಬಾಲಸುಬ್ರಮಣ್ಯ ಅವರ ಮುಖಾಂತರ ಆರೋಗ್ಯ ಸಚಿವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ ಖಾಯಂ ಶಸ್ತ್ರಚಿಕಿತ್ಸಕರಿಲ್ಲದೆ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಪ್ರತಿನಿತ್ಯ ಆರೋಗ್ಯ ಸೇವೆಗಾಗಿ ಗ್ರಾಮೀಣ ಭಾಗದಿಂದ ಬರುವ ಸಾವಿರಾರು ರೋಗಿಗಳು ಪರದಾಡುವಂತಾಗಿದೆ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ವಿಜಯ್‌ಕುಮಾರ್ ನಿವೃತ್ತಿಯಾಗಿ ಸುಮಾರು ಒಂದೂವರೆ ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಸರಕಾರವು ಈವರೆಗೂ ಜಿಲ್ಲಾಸ್ಪತ್ರೆಗೆ ಖಾಯಂ ಶಸ್ತ್ರಚಿಕಿತ್ಸಕರನ್ನು ನೇಮಕ ಮಾಡಲು ಮುಂದಾಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಭಾರ ಶಸ್ತ್ರಚಿಕಿತ್ಸಕರಾಗಿರುವ ಮಮತಾ ಅವರು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಆಸ್ಪತ್ರೆಯನ್ನು ಕೆಲವು ಅನಾಮಧೇಯ ವ್ಯಕ್ತಿಗಳು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದುಕೊಂಡು ನಾನೇ ಆಸ್ಪತ್ರೆಯ ಮುಖ್ಯ ವೈದ್ಯರು ಎಂದು ಡಿ ಗ್ರೂಪ್ ನೌಕರರನ್ನು ಹಾಗೂ ಸರ್ಕಾರಿ ನರ್ಸ್ಗಳ ಮೇಲೆ ಒತ್ತಡ ಹಾಕುವ ಪ್ರವೃತ್ತಿಯನ್ನು ರೂಢಿಸಿಕೊಂಡಿರುವುದರಿಂದ ಆಸ್ಪತ್ರೆ ಇನ್ನಷ್ಟು ಹದಗೆಡುವುದಕ್ಕೆ ಕಾರಣವಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಡರೋಗಿಗಳು ಬಂದರೆ ಖಾಯಂ ವೈದ್ಯರಿಲ್ಲದೆ ತರಬೇತಿ ವೈದ್ಯರು ರೋಗಿಗಳ ಜೊತೆ ಚೆಲ್ಲಾಟವಾಡಿ ಮೆಡಿಕಲ್ ಕಾಲೇಜು ಇಲ್ಲವೇ ಬೆಂಗಳೂರಿಗೆ ಕಳುಹಿಸುವ ದಂಧೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಒಳಗೊಂಡಂತೆ ಸುಮಾರು ೫೦೦ ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಪ್ರತಿನಿತ್ಯ ಸಾವಿರಾರು ಜನ ರೋಗಿಗಳು ಬೇರೆಬೇರೆ ಜಿಲ್ಲಾ, ತಾಲೂಕು, ಗಡಿಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪ್ರಸ್ತುತ ದಿನದ ೨೪ ಗಂಟೆ ಕೆಲಸ ನಿರ್ವಹಿಸುತ್ತಿದ್ದ ಪ್ರಾಮಾಣಿಕ ಡಾ.ಶ್ರೀನಾಥ್ ಅವರನ್ನು ಸರ್ಕಾರದ ಅಂಗದಲ್ಲಿ ಯಾವುದೇ ಮಾಹಿತಿ ನೀಡದೆ ಏಕಾಏಕಿ ಕೆಜಿಎಫ್ ಗೆ ವರ್ಗಾವಣೆ ಮಾಡಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ತಾಯಿ ಮತ್ತು ಮಕ್ಕಳ ಸಮಸ್ಯೆಗೆ ಸ್ಪಂದಿಸಲು ಸಮಸ್ಯೆಯಾಗುತ್ತಿದೆ ಪ್ರಸ್ತುತವಾಗಿ ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ವೈರಲ್ ಫೀವರ್, ವಾಂತಿ-ಬೇಧಿ ಇತ್ಯಾದಿ ಖಾಯಿಲೆಗಳು ವಿಶೇಷವಾಗಿ ಮಕ್ಕಳ ತಜ್ಞರ ವಿಭಾಗದಲ್ಲಿ ತುಂಬಾ ಉಲ್ಬಣವಾಗಿರುತ್ತವೆ. ಆಸ್ಪತ್ರೆಯ ಎಲ್ಲಾ ಬೆಡ್ ಗಳು ತುಂಬಿ ತುಳುಕುತ್ತಿದ್ದು, ಸಮರ್ಪಕವಾಗಿ ಚಿಕಿತ್ಸೆ ದೊರೆಯದೆ ರೋಗಿಗಳು ಕಂಗಾಲಾಗಿರುವುದರಿಂದ ಮಕ್ಕಳ ವೈದ್ಯ ಶ್ರೀನಾಥ್ ಅವರನ್ನು ಆರೋಗ್ಯ ಮಂತ್ರಿಗಳು ಇಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಒಂದು ಕಡೆ ಆಸ್ಪತ್ರೆಯಲ್ಲಿ ಹಾದಿ ತಪ್ಪಿರುವ ಆಡಳಿತ, ಅವ್ಯವಸ್ಥೆ ಮತ್ತೊಂದು ಕಡೆ ಮೂಲಭೂತ ಸೌಕರ್ಯಗಳ ಕೊರತೆ ಕುಡಿಯುವ ನೀರು ಶೌಚಾಲಯ ಮತ್ತಿತರ ಅವ್ಯವಸ್ಥೆಗಳಿಂದ ಆರೋಗ್ಯವಂತರು ಅನಾರೋಗ್ಯವಂತರಾಗುವ ಮಟ್ಟಕ್ಕೆ ಆಸ್ಪತ್ರೆ ಹದಗೆಟ್ಟಿದೆ ಅನಧಿಕೃತ ಅಂಗಡಿಗಳ ಹಾವಳಿಯಿಂದ ಆಸ್ಪತ್ರೆಗೆ ಬರುವ ರೋಗಿಗಳು ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ರಸ್ತೆಗಳಲ್ಲೂ ದ್ವಿಚಕ್ರವಾಹನಗಳನ್ನು ನಿಲ್ಲಿಸುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಬಂದರೂ ದಾರಿಯಿಲ್ಲದೆ ಪರದಾಡಬೇಕಾದ ಪರಿಸ್ಥಿತಿಯಿದೆ ಎಂದು ದೂರು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಸರ್ಕಾರ ಖಾಯಂ ವೈದ್ಯರನ್ನು ನೇಮಕ ಮಾಡಿ ತಾಯಿ ಮತ್ತು ಮಕ್ಕಳ ವೈದ್ಯ ಶ್ರೀನಾಥ್ ಅವರನ್ನು ಇಲ್ಲಿಯೇ ಮುಂದುವರೆಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಮೂರಂಡಹಳ್ಳಿ ಶಿವಾರೆಡ್ಡಿ, ಸುಪ್ರೀಂಚಲ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ಶೈಲಜ, ಗೌರಮ್ಮ, ರತ್ನಮ್ಮ, ವೆಂಕಟಮ್ಮ, ಶಶಿಕುಮಾರ್, ಮುನಿರಾಜು, ಇನ್ನೂ ಮುಂತಾದವರಿದ್ದರು.