ಕೋಲಾರ: ಹದಗೆಟ್ಟಿರುವ ಜಿಲ್ಲಾಡಳಿತ ಮತ್ತು ಸರ್ಕಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು ಇಲ್ಲವೇ ಕೋಲಾರ ಜಿಲ್ಲೆಯನ್ನು ನೆರೆಯ ಆಂದ್ರಕ್ಕೆ ಸೇರಿಸುವಂತೆ ಒತ್ತಾಯಿಸಿ ಅ.15ರಂದು ಎತ್ತಿನ ಬಂಡಿಯ ಸಮೇತ ನಗರದ ಹೊಸ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ತೋಟಗಾರಿಕೆ ಇಲಾಖೆಯ ಅವರಣದಲ್ಲಿ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯದಲ್ಲಿ ಅಭಿವೃದ್ದಿ ಶೂನ್ಯವಾಗಿದ್ದು, ಬಡವರು ಕೂಲಿ ಕಾರ್ಮಿರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದನ್ನು ಬಿಟ್ಟು ಮುಡಾ ಹಗರಣ ಹಾಗೂ ವಾಲ್ಮಿಕಿ ನಿಗಮದಲ್ಲಿರುವ ನಡೆದಿರುವ ಹಗರಣ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಗ್ನರಾಗಿದ್ದಾರೆ ಇದರಿಂದ ಜನಸಾಮಾನ್ಯರ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಕೋಲಾರ ಜಿಲ್ಲಾಡಳಿತ ಕಛೇರಿಯು ಜಿಲ್ಲೆಯ ಶಕ್ತಿ ಕೇಂದ್ರ ಆ ಶಕ್ತಿ ಕೇಂದ್ರದಲ್ಲೇ ಇತ್ತೀಚೆಗೆ ಭೂ ಪರಿವರ್ತನೆಗಾಗಿ ಕಿರಿಯ ಅಧಿಕಾರಿಗಳು ಲಕ್ಷ ಲಕ್ಷ ಹಣ ಲಂಚದ ರೂಪದಲ್ಲಿ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಸುಮಾರು 8.5 ಲಕ್ಷ ಲಂಚದ ರೂಪದಲ್ಲಿ ಪಡೆದುಕೊಂಡಿದ್ದು ಇದರಲ್ಲಿ ಯಾರ ಯಾರಿಗೆ ಪಾಲು ಇದೆ ಎನ್ನುವುದನ್ನು ಸಾರ್ವಜನಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗಗಳಲ್ಲಿ ಅಭಿವೃದ್ದಿ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನ ಹರಿಸಬೇಕಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದು ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಅಭಿವೃದ್ದಿ ಕುಸಿದಿದೆ ಪಂಚಾಯಿತಿಗಳನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಳ್ಳಲು ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಲವು ತಿಂಗಳುಗಳಿಂದ ಖಾಲಿ ಇದೆ ಜೊತೆಗೆ ಸಾವಿರಾರು ಬಡವರು, ರೈತರು, ಕೂಲಿ ಕಾರ್ಮಿಕರ ಆರೋಗ್ಯ ಕಾಪಾಡಬೇಕಾದ ಜಿಲ್ಲಾ ಶಸ್ತ್ರಚಿಕಿತ್ಸಕರು ಹುದ್ದೆಯೂ ಖಾಲಿ ಇದೆ ಜೊತೆಗೆ ಜಿಲ್ಲಾಧ್ಯಂತ ಇರುವ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹುದ್ದೆಗಳಿ ಖಾಲಿ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಜಿಲ್ಲೆಯಲ್ಲಿರುವ ಸ್ಥಳೀಯ ಶಾಸಕರು ಗಂಬೀರವಾಗಿ ಪರಿಗಣಸಿತ್ತಿಲ್ಲ ಇದರಿಂದ ಕೋಲಾರ ಜಿಲ್ಲಾಡಳಿತ ಯಂತ್ರ ಸಂಪೂರ್ಣವಾಗ ಕುಸಿದಿದೆ ಇದರಿಂದ ಜನ ಸಮಾನ್ಯರ ಕೆಲಸ ಕಾರ್ಯಗಳು ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ ಲಕ್ಷಾಂತರ ರೈತ ಕುಟುಂಬಗಳ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಜೀವನಾಡಿಯಾಗಿದ್ದ ಡಿಸಿಸಿ ಬ್ಯಾಂಕು ಇಂದು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ ಬ್ಯಾಂಕಿಗೆ ಆಡಳಿತಾಧಿಕಾರಿ ನಾಮಕಾವಸ್ಥೆಗೆ ನೇಮಕವಾಗಿದ್ದಾರೆ ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ಅಕ್ರಮ ಹಾಗೂ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರಲ್ಲದೆ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ತಮ್ಮ ಸ್ವಾವಲಂಬಿ ಜೀವನ ನಡೆಸಲು ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೋಚಿಮುಲ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕಾದ ಅನಿವಾರ್ಯ ಎದುರಾಗಿದೆ ಅಲ್ಲದೆ ಕೋಚಿಮುಲ್ ಆಡಳಿತಾಧಿಕಾರಿ ನೇಮಕ ಮಾಡಿ ಕೂಡಲೇ ಡಿಸಿಸಿ ಬ್ಯಾಂಕ್ ಹಾಗೂ ಕೋಚಿಮುಲ್ ಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ನಗರಸಭೆಗೆ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿದ್ದರೂ ಅಕ್ರಮ ನಡೆದಿದೆ ಎಂದು ನಗರಸಭೆ ಸದಸ್ಯರು ಶಾಸಕರು ಆರೋಪಿಸಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಿ ಸರ್ಕಾರ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದಲ್ಲದೆ ಕಳೆದ ಹತ್ತಾರು ವರ್ಷಗಳಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗವನ್ನು ಗುರುತಿಸಿ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿದ್ದರೂ ಸರ್ಕಾರವಾಗಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾರೆಡ್ಡಿ, ಯಲ್ಲಪ್ಪ, ಬಂಗವಾದಿ ನಾಗರಾಜಗೌಡ, ಸುಪ್ರಿಂ, ಚಲಪತಿ, ಮಂಗಸಂದ್ರ ತಿಮ್ಮಣ್ಣ, ತೆರ್ನಹಳ್ಳಿ ಆಂಜಿನಪ್ಪ, ಶೈಲಜ, ರತ್ನಮ್ಮ, ಮುನಿರತ್ನಮ್ಮ ಗೌರಮ್ಮ, ಸೇರಿದಂತೆ ಮುಂತಾದವರಿದ್ದರು.