ಜಿಲ್ಲಾಡಳಿತ ಭವನದಲ್ಲಿ ಕೆಟ್ಟು ನಿಂತ ಲಿಫ್ಟ್; ಮೆಟ್ಟಿಲೇ ಗತಿ; ವಿಕಲಚೇತನರು, ಮಹಿಳೆಯರು, ವೃದ್ಧರ ಪರದಾಟ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಭವನದಲ್ಲಿ ಲಿಫ್ಟ್ ಕೆಟ್ಟು ನಿಂತು ಹಲವು ತಿಂಗಳುಗಳೇ ಕಳೆದಿವೆ, ಲಿಫ್ಟ್ ದುರಸ್ತಿ ಮಾಡುವ ಪ್ರಯತ್ನವೇ ನಡೆದಿಲ್ಲ.

ಜಿಲ್ಲೆಯ ಜನರು ಪ್ರತಿದಿನ ತಮ್ಮ ಕೆಲಸ ಕಾರ್ಯಗಳಿಗೆ ಬಂದು ಹೋಗುವ ಜಿಲ್ಲಾಡಳಿತ ಕಚೇರಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಲಿಫ್ಟ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಮೇಲಿನ ಮಹಡಿಗಳಿಗೆ ತೆರಳಲು ವೃದ್ಧರು, ಮಹಿಳೆಯರು, ವಿಕಲಚೇತನರು ಪರದಾಡುವಂತಾಗಿದೆ.

ಒಂದೊಂದು ಮಹಡಿಯಲ್ಲಿ ಒಂದೊಂದು ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಭವನದಲ್ಲಿ ಎರಡು ಕಡೆ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಹಲವು ತಿಂಗಳುಗಳಿಂದ ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್‌ ಸೇವೆ ಸ್ಥಗಿತಗೊಂಡಿದೆ. ಇದರಿಂದ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ತೆರಳಲು ಮೆಟ್ಟಿಲು ಹತ್ತುವದು ವಿಕಲಚೇತನರು, ಮಹಿಳೆಯರು, ಹಿರಿಯ ನಾಗರಿಕರಿಗೆ ಅನಿವಾರ್ಯವಾಗಿದೆ. ಈ ಕುರಿತು ದೂರು ನೀಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಲಿಫ್ಟ್ ಕೆಟ್ಟು ನಿಂತು 5 ತಿಂಗಳಾದ್ರು ದುರಸ್ತಿ ಮಾಡುವ ಪ್ರಯತ್ನವನ್ನ ಕಟ್ಟಡ ನಿರ್ವಹಣೆ ಹೊಣೆ ಹೊತ್ತವರು ಮಾಡಿಲ್ಲ, ಕೇವಲ ಕಾಗದ ಪತ್ರಗಳ ವ್ಯವಹಾರ ಮಾಡಿ ಸುಮ್ಮನಾಗಿದ್ದಾರೆ.

ಲಿಫ್ಟ್ ಸಮಸ್ಯೆ ಜೊತೆಗೆ ಇನ್ನೂ ಹಲವಾರು ಜನ ಸ್ನೇಹಿ ಸೌಲಭ್ಯಗಳ ವ್ಯವಸ್ಥೆ ಜಿಲ್ಲಾಡಳಿತ ಕಚೇರಿಯಲ್ಲಿ ಇಲ್ಲ. ಸಾರ್ವಜನಿಕರಿಗೆ ಯಾವಯಾವ ಸೌಲಭ್ಯ ಬೇಕೆಂಬುದು ಅರಿತು ಅದನ್ನು ಕಟ್ಟಡದಲ್ಲಿ ಅಳವಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

Leave a Reply

Your email address will not be published. Required fields are marked *