ಕೋಲಾರ: ಕಾಂಗ್ರೆಸ್ ಪಕ್ಷದಿಂದ ಬಲಗೈ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರಲಾಗಿದ್ದು, ನಮ್ಮ ಸಮುದಾಯಕ್ಕೆ ಬೆಂಬಲವಾಗಿದ್ದ ಕೆ.ಎಚ್.ಮುನಿಯಪ್ಪರಿಗೂ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡ ರಾಮಚಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಪಂ ಮಾಜಿ ಸದಸ್ಯ, ತಾಪಂನಲ್ಲಿ 10 ವರ್ಷ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷನಾಗಿ ಸೇವೆ ಮಾಡಿದ್ದೇನೆ. ನಾನು ಎಲ್ಲ ಸಮಾಜದ ಮುಖಂಡರೊಂದಿಗೆ ಉತ್ತಮವಾಗಿ ನಡೆದುಕೊಂಡಿದ್ದೇನೆ ಕೆ.ಎಚ್.ಮುನಿಯಪ್ಪ ಜತೆಗೆ 25 ವರ್ಷ ಸುದೀರ್ಘವಾಗಿ ಕೆಲಸ ಮಾಡಿದ್ದು, ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಹಾಗೂ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ನಿರಂತರ ಅನ್ಯಾಯವಾಗುತ್ತಿರುವ ಬಗ್ಗೆ ನಿಯೋಗ ತೆರಳಿ ಕಾಂಗ್ರೆಸ್ ನಾಯಕರ ಬಳಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕರೆ ಮಾಡಿ ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸಿದ್ದು, ಯಾವುದೇ ಬೇಡಿಕೆಗಳನ್ನಿಡದೆ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿರುವುದಾಗಿ ಹೇಳಿದರು.
ಬಲಗೈ ಸಮುದಾಯಕ್ಕೆ ಕೆ.ಎಚ್.ಮುನಿಯಪ್ಪ ಬಲವಾಗಿದ್ದರು ಇದೀಗ ಯಾರೂ ಇಲ್ಲದ ಕಾರಣ ಕಾಂಗ್ರೆಸ್ ವಿರುದ್ಧ ಸಿಟ್ಟು ಹಾಗೂ ಕೆ.ಎಚ್.ಮುನಿಯಪ್ಪರ ಅಸಹಾಯಕತೆಯಿಂದಾಗಿ ಸ್ವಾಭಿಮಾನಕ್ಕೆ ಧಕ್ಕೆ ಆದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಯ ತೀರ್ಮಾನ ಕೈಗೊಳ್ಳಲಾಗಿದೆ.
ಜೆಡಿಎಸ್ ಪಕ್ಷ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರಬುದ್ಧವಾಗಿದ್ದು, ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಸ್ಥಳೀಯರು, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಹೊರಗಿನವರಾಗಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಎಲ್ಲರೂ ಸೇರಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್‌ನ ಹುರಿಯಾಳು, ೩೦ ವರ್ಷಗಳಿಂದ ಉತ್ತಮ ನಾಯಕತ್ವ ಹೊಂದಿದ್ದ ಸಕ್ರಿಯ ಮುಖಂಡ ರಾಮಚಂದ್ರ ಅವರು ಕಾಂಗ್ರೆಸ್ ನಲ್ಲಿ ಪ್ರಭಾವಿ ಮುಖಂಡರಾಗಿ, ಜಿಲ್ಲೆಯಲ್ಲಿ ಪ್ರಭಲರಾಗಿದ್ದಾರೆ. ಶಾಸಕರು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದ ಕಾರಣ ಜೆಡಿಎಸ್ ನ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ತೀರ್ಮಾನ ಮಾಡಿದ್ದಾರೆ. ಇವರ ಸೇರ್ಪಡೆಯಿಂದಾಗಿ ಪಕ್ಷಕ್ಕೆ ಬಲ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ರಾಮಚಂದ್ರರೆಡ್ಡಿ, ಹುಲಿಬೆಲೆ ಗ್ರಾಪಂ ಮಾಜಿ ಉಪಾಧ್ಯಕ್ಷ ರಂಗನಾಥ್, ಮುಖಂಡರಾದ ಯಲ್ಲಪ್ಪ, ಬಲಿಜ ಸಮುದಾಯದ ತೋಟಗಳ ಅಶೋಕ್ ಉಪಸ್ಥಿತರಿದ್ದರು.