
ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಜಿಂಕೆ ಚರ್ಮ ಹಾಗೂ ಕಾಡುಹಂದಿ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ರವಿವಾರ ಸಂಜೆ ಬಂಧಿಸಿದ್ದಾರೆ.
ಬಂಧಿತರನ್ನು ತಾಲೂಕಿನ ಬಾಳೆಕೊಪ್ಪ ಗ್ರಾಮದ ಕನಕಪ್ಪ ದುರ್ಗಪ್ಪ ಮಾದರ್, ಪರಶುರಾಮ್ ಕನಕಪ್ಪ ಮಾದರ್ ಹಾಗೂ ಸೊರಬ ತಾಲೂಕಿನ ಕೋಡಿಕೊಪ್ಪ ಗ್ರಾಮದ ಸುರೇಶ ದೇವಪ್ಪ, ಶಿವಪುತ್ರಪ್ಪ ಹನುಮಂತಪ್ಪ ಮತ್ತು ಉಮೇಶ ಗುಡ್ಡಪ್ಪ ಎಂದು ಗುರುತಿಸಲಾಗಿದೆ.
ಕಾತೂರು ಅರಣ್ಯ ವಲಯದ ಬಾಳೆಕೊಪ್ಪ (ಕರ್ಕಲ ಜಡ್ಡಿ) ಗ್ರಾಮದ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಬೇಟೆ ನಡೆಯುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಬ್ಬಂದಿ, ಎರಡು ಬೈಕ್ಗಳಲ್ಲಿ ಜಿಂಕೆ ಚರ್ಮ ಹಾಗೂ ಸುಮಾರು 3.9 ಕೆ.ಜಿ.ಯಷ್ಟು ಕಾಡುಹಂದಿ ಮಾಂಸವನ್ನು ಸಾಗಿಸುತ್ತಿದ್ದಾಗ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಎರಡು ಬೈಕ್ಗಳು, ಜಿಂಕೆ ಚರ್ಮ ಹಾಗೂ ಮಾಂಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.