ಜಾತ್ರೆ, ಮಾರುಕಟ್ಟೆ ಹಾಗೂ ಬಸ್ ಗಳಲ್ಲಿ ಮಹಿಳೆಯರ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆ.ಆರ್ ಪುರ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 40 ಲಕ್ಷ ಮೌಲ್ಯದ 536 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಈ ಬಂಧನದಿಂದ ನಗರದ ವಿವಿಧ ಪೊಲೀಸ ಠಾಣೆಗಳಲ್ಲಿ ದಾಖಲಾಗಿದ್ದ 7 ಇತರೆ ಪ್ರಕರಣಗಳು ಬಗೆಹರಿದಂತಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ತಿಳಿಸಿದರು.
ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ನಗರ ಪೊಲೀಸರು ಇಬ್ಬರು ಅಂತರ ರಾಜ್ಯ ಅಪರಾಧಿಗಳು ಸೇರಿದಂತೆ ಒಟ್ಟು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 30.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದರು.
ಜಲಸಂಪನ್ಮೂಲ ಇಲಾಖೆಯ ಗ್ರೂಪ್ ಸಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನಕಲಿ ದಾಖಲೆ ಸಲ್ಲಿಸಿದ್ದ 37 ಅನರ್ಹ ಅಭ್ಯರ್ಥಿಗಳು ಹಾಗೂ 11 ಮಧ್ಯವರ್ತಿಗಳನ್ನು ಸಿಸಿಬಿಯ ವಿಶೇಷ ತನಿಖಾ ದಳವು ಬಂಧಿಸಿದೆ. ಹೆಚ್ಚಿನ ತನಿಖೆ ವೇಳೆ ಅಧಿಕಾರಿಗಳು 17 ಮೊಬೈಲ್ ಹಾಗೂ ಒಂದು ಹಾರ್ಡ್ ಡಿಸ್ಕ್, 40 ಲಕ್ಷದ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಥಾಯ್ಲೆಂಡ್ ನಿಂದ ಹೈಡ್ರೋ ಗಾಂಜಾ ಕಳ್ಳಸಾಗಾಣೆ ಮಾಡುತ್ತಿದ್ದ ಮಹಿಳೆಯನ್ನು ಸಿಸಿಬಿಯ ಮಾದಕ ದ್ರವ್ಯ ವಿಭಾಗವು ಬಂಧಿಸಿದೆ. ಈ ಕಾರ್ಯಾಚರಣೆ ವೇಳೆ 25 ಲಕ್ಷ ಮೌಲ್ಯದ 570 ಗ್ರಾಂ ಹೈಡ್ರೋ ಗಾಂಜಾ, ಒಂದು ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮತ್ತೋರ್ವ ಆರೋಪಿ ತಲೆಮರಿಸಿಕೊಂಡಿದ್ದು, ಆತನ ಶೋಧ ಕಾರ್ಯ ಮುಂದುವರೆದಿದೆ ಎಂದರು.
ಇತ್ತೀಚೆಗೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇವರಿಂದ 5.81 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಹಾಗೂ 4 ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆ ಕಳ್ಳತನ ಹಾಗೂ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ಗೌರಿ ಗಣೇಶ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಆ ಪೈಕಿ ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಬಳಸಬೇಕು. ರಾತ್ರಿ 10 ಗಂಟೆ ನಂತರ ಹಾಗೂ ಬೆಳಗ್ಗೆ 6 ಗಂಟೆಗೂ ಮುನ್ನ ಯಾವುದೇ ರೀತಿಯ ಪಟಾಕಿ ಹಚ್ಚುವಂತಿಲ್ಲ. ಗಣೇಶ ಮೂರ್ತಿಯ ಮೆರವಣಿಗೆಗೆ ಪ್ರತ್ಯೇಕ ಮಾರ್ಗ ಸೇರಿದಂತೆ ಇತರೆ ಮಾರ್ಗಸೂಚಿಗಳನ್ನು ನೀಡಿದರು.