ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಬಿ.ಎನ್.ಬಚ್ಚೇಗೌಡ

ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಬರಗಾಲ ಉಂಟಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಂಡು ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ಎನ್.ಬಚ್ಚೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ ಜಲ ಜೀವನ್ ಮಿಷನ್ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಅವರು. ಜಲ ಜೀವನ್ ಮಿಷನ್ ಕಾಮಗಾರಿ ಶೀಘ್ರ ಮುಕ್ತಾಯಗೊಂಡರೆ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ. ಜಿಲ್ಲೆಯಲ್ಲಿ ಈಗಾಗಲೇ 714 ಕೊಳವೆಬಾವಿ ಕೊರೆದಿದ್ದು ಅದರಲ್ಲಿ 626 ಕೊಳವೆಬಾವಿಗಳು ಯಶಸ್ವಿಯಾಗಿದೆ. ಒವರ್ ಹೆಡ್ ಟ್ಯಾಂಕ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಹಾಗಾಗಿ ಶೀಘ್ರ ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣ ಗೊಳಿಸಿ ಎಂದು ಹೇಳಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಾಣವಾಗಬೇಕಿರುವ ಮನೆಗಳು, ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಫಲಾನುಭವಿಗಳಿಗೆ ಸೂಚನೆ ನೀಡಿ, ನಿವೇಶನ ಇರುವಂತಹ ಫಲಾನುಭವಿಗಳನ್ನು ಗುರ್ತಿಸಿ ಮನೆ ಮಂಜೂರು ಮಾಡಿ ಎಂದು ಹೇಳಿದರು.

ಮಾರ್ಚ್ 3 ರಿಂದ ಪಲ್ಸ್ ಪೋಲಿಯೊ ಕಾರ್ಯಕ್ರಮವಿದ್ದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ 0-5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಜನನಿ ಸುರಕ್ಷಾ ಯೋಜನೆಯ ಸೌಲಭ್ಯ ಪ್ರತಿ ಅರ್ಹ ಫಲಾನುಭವಿಗಳಿಗೆ ಸಿಗಬೇಕು ಎಂದರು.
ಕಳೆದ ವರ್ಷಕ್ಕಿಂತ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಜಿಲ್ಲೆ ಉತ್ತಮ ಫಲಿತಾಂಶ ಪಡೆಯಬೇಕು. ಹೀಗಾಗಿ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ಪೋಷಕರಿಗೆ ವಿಶೇಷ ತರಬೇತಿ ನೀಡಿ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಾಲಾ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಕೆಲವು ಭಾಗಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಯು ವಿಳಂಬವಾಗುತ್ತಿದ್ದು, ಇದರಿಂದಾಗಿ ಕಾಮಗಾರಿ ವೆಚ್ಚವು ಹೆಚ್ಚಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಲ್ಲಿ ಬರುವಂತಹ ಗಂಗಾ ಕಲ್ಯಾಣ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತಂದು ಫಲಾನುಭವಿಗಳಿಗೆ ತಲುಪಿಸಿ ಎಂದರು.

ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ವರದಿಗಳ ಪ್ರಕಾರ ಬರಗಾಲದಿಂದ ಜಿಲ್ಲೆಯಲ್ಲಿ 25 ಅಡಿ ಅಂತರ್ಜಲ ಕುಸಿದಿದೆ. ಜನ ಜಾನುವಾರುಗಳಿಗೆ ನೀರು, ಮೇವು ಅಭಾವ ಆಗದಂತೆ ಕ್ರಮ ವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಯೋಜನೆಗಳನ್ನು ವಿಳಂಬ ಮಾಡದೆ ಶೀಘ್ರವೇ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ, ಅಧಿಕಾರಿಗಳು ಸಮಯಪ್ರಜ್ಞೆ ಪಾಲಿಸಿ ಕರ್ತವ್ಯವನ್ನು ಜವಾಬ್ದಾರಿಯಾಗಿ ನಿರ್ವಹಿಸಬೇಕು. ಜಿಲ್ಲೆಯನ್ನು ಎಲ್ಲಾ ವಿಧದಲ್ಲೂ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಉಪ ಕಾರ್ಯದರ್ಶಿ ರಮೇಶ್, ಯೋಜನಾಧಿಕಾರಿ ವಿಠ್ಠಲ ಕಾವ್ಳೆ ಸೇರಿದಂತೆ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *