ಜಮೀನು ವ್ಯಾಜ್ಯಕ್ಕೆ ವ್ಯಕ್ತಿಯೋರ್ವ ಮನೆಗೆ ನುಗ್ಗಿ ಸಂಬಂಧಿಕನನ್ನೇ ಹತ್ಯೆ ಮಾಡಿ, ಬಳಿಕ ಘಟನಾ ಸ್ಥಳದಲ್ಲೇ ಇದ್ದು ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪೋಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀನರಸಪ್ಪ (60) ಹತ್ಯೆಗೀಡಾದವರು. ನಂದೀಶ್ ಕೊಲೆಗೈದ ಆರೋಪಿ.
ಕೊಲೆಯಾದ ಲಕ್ಷ್ಮೀನರಸಪ್ಪ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಗುತ್ತಿಗೆದಾರರಾಗಿದ್ದರು. ಲಕ್ಷ್ಮೀನರಸಪ್ಪ ಮತ್ತು ಆರೋಪಿ ನಂದೀಶ್ ಕುಟುಂಬದ ನಡುವೆ ಹಲವು ವರ್ಷಗಳಿಂದ ಜಮೀನು ಕಲಹ ಇದ್ದು, ಕೋರ್ಟ್ನಲ್ಲಿ ಕೇಸ್ ನಡೆಯುತ್ತಿತ್ತು.
ಭಾನುವಾರ ಬೆಳಗ್ಗೆ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ನಂದೀಶ್, ಲಕ್ಷ್ಮೀನರಸಪ್ಪ ಅವರ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಲಕ್ಷ್ಮೀನರಸಪ್ಪ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಲ್ಲೆ ನಡೆಯುತ್ತಿದ್ದ ವೇಳೆ ಲಕ್ಷ್ಮೀನರಸಪ್ಪ ಅವರನ್ನು ಪಾರು ಮಾಡಲು ಆತನ ಕುಟುಂಬಸ್ಥರು ಬಂದಿದ್ದಾರೆ. ಈ ವೇಳೆ ಅವರ ಮೇಲೂ ದಾಳಿ ಮಾಡಿದ್ದರಿಂದ ಅವರು ಕೂಡ ಗಾಯಗೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಬಳಿಕ ಪರಾರಿಯಾಗದ ಆರೋಪಿ, ಘಟನಾ ಸ್ಥಳದಲ್ಲೇ ಇದ್ದು ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿಯನ್ನು ವಿಚಾರಣೆ ನಡೆಸಿರುವ ಪೊಲೀಸರು, ಕೊಲೆಗೆ ಜಮೀನು ವ್ಯಾಜ್ಯ ಕಾರಣವೆಂದು ತಿಳಿಸಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.