ಜನ ಸಾಮಾನ್ಯರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಚಿಂತಿಸಿ- ಗಾಯಕ ವಾಸುಕಿ ವೈಭವ್

ಜನಸಾಮಾನ್ಯರ ಬದುಕನ್ನು ಹಸನಾಗಿಸುವ ಹೊಸ ವಿಚಾರ ಹಾಗೂ ಅನ್ವೇಷಣೆಗಳನ್ನು ಶ್ರದ್ಧೆಯಿಂದ ಮಾಡುವುದರಿಂದ ನಮಗೆ ಯಶಸ್ಸು, ಶ್ರೇಯಸ್ಸು, ಆತ್ಮಸಂತೋಷಗಳೆಲ್ಲವೂ ಒದಗಿಬರುತ್ತದೆ ಎಂದು ಸಂಗೀತ ಸಂಯೋಜಕ, ನಟ ವಾಸುಕಿ ವೈಭವ್ ಹೇಳಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿವಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವ- “ಅನಾದ್ಯಂತ-2023′ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕನಸುಗಳನ್ನು ವಿದ್ಯಾಸಂಸ್ಥೆಗಳಲ್ಲಿಯೇ ಸದಾ ತಪ್ಪುಗಳನ್ನು ಮಾಡುತ್ತಲೇ ಕಲಿಯುತ್ತೇವೆ. ಆದರೆ ಆ ತಪ್ಪುಗಳನ್ನು ತಿದ್ದುವ ಗುರುಗಳು ಇಲ್ಲಿರುತ್ತಾರೆ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಗುರುಗಳಿಗೆ ಹಾಗೂ ತಂದೆ-ತಾಯಿಗಳಿಗೆ ಸದಾ ಋಣಿಯಾಗಿರಬೇಕೆಂದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿವಿಯ ಪ್ರಾಂಶುಪಾಲ ಡಾ.ಎಚ್‌.ಸಿ.ನಾಗರಾಜ್ ಮಾತನಾಡಿ, ‘ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ನೈಸರ್ಗಿಕ ಸಂಪನ್ಮೂಲಗಳ ಅತಿ ಬಳಕೆ, ತಲೆದೋರಬಹುದಾದ ಭೀಕರ ಜಲಕ್ಷಾಮ, ಇತರೆ ಪ್ರಾಣಿಪಕ್ಷಿಗಳ ಜೀವಕ್ಕೆ

ಸಂಚಕಾರ ಇತ್ಯಾದಿಗಳಿಂದ ನಲುಗುತ್ತಿರುವ ನಮ್ಮ ವಿಶ್ವಕ್ಕೆ ಸೂಕ್ತ ಪರಿಹಾರವನ್ನು ನಮ್ಮ ಯುವ ಎಂಜಿನಿಯರ್‌ಗಳು ಕಂಡುಕೊಳ್ಳಬೇಕಿದೆ ಎಂದರು.ಇತ್ತೀಚಿನ ಯುವ ತಂತ್ರಜ್ಞರಿಗೆ ಅಪಾರ ಅರಿವಿದೆ. ಸಮಾಜದ ಬಗ್ಗೆ ಕಾಳಜಿಯಿದೆ ಹಾಗೂ ಹೊಸತನ್ನು ಅನ್ವೇಷಿಸುವ ಉತ್ಸಾಹವಿದೆ. ತಂತ್ರಜ್ಞಾನದ ಸದ್ಬಳಕೆಯಿಂದ ಮಾತ್ರ ಈ ಜಗತ್ತನ್ನು ಅಪಾಯಗಳಿಂದ ಪಾರು ಮಾಡಬಹುದು ಎಂದ ಅವರು, ಸಂಸ್ಕೃತಿ ಸಾಹಿತ್ಯಗಳಿಂದ ಸಮಾಜಮುಖಿ ಮಾನವೀಯ ಗುಣಗಳು ವೃದ್ಧಿಯಾಗುತ್ತವೆ ಎಂಬ ಉದ್ದೇಶದಿಂದ ಈ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ಡಾ.ಅಶ್ವಿತಾ ಪೂಂಜ, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್‌, ಪೂಂಜ, ಡಾ. ಸಂದೀಪ್ ಶಾಸ್ತ್ರಿ, ಡಾ.ಶ್ರೀಧರ್, ಪ್ರೊ.ಎಸ್.ನಾಗೇಂದ್ರ, ಡಾ. ಕಿರಣ್ ಐತಾಳ್ ಮತ್ತಿತರರಿದ್ದರು. ಉತ್ಸವದಲ್ಲಿ ‘ಐಡಿಯಾಥಾನ್, ‘ಸ್ಟುಡ್‌ ಸ್ಯಾಟ್’, ‘ಸಿಮುಲೇಶನ್ ರೇಸ್’, ‘ರೂಬಿಕ್ ಕ್ಯೂಬ್’ ಇತ್ಯಾದಿ ತಂತ್ರಜ್ಞಾನ ಕ್ಷೇತ್ರದ ಸ್ಪರ್ಧೆಗಳಲ್ಲದೆ ಬೀದಿ ನಾಟಕ, ಕ್ವಿಜ್, ನೃತ್ಯ, ಚರ್ಚಾ ಸ್ಪರ್ಧೆ, ಕ್ರೀಡೆ, ಫ್ಯಾಷನ್ ಶೋ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *