ಬೇಸಿಗೆ ಕಾಲ ಆರಂಭವಾಗಿರುವುದರಿಂದ ತಾಲೂಕಿನಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಆಹಾರ, ಮೇವು ಪೂರೈಕೆ, ಆರೋಗ್ಯ ರಕ್ಷಣೆಗೆ ಅಧಿಕಾರಿಗಳು ಶೀಘ್ರವಾಗಿ ಕ್ರಮ ವಹಿಸಬೇಕು ಎಂದು ಶಾಸಕ ಧೀರಜ್ ಮುನಿರಾಜು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ವರ್ಷ ಜಿಲ್ಲೆಯಾದ್ಯಂತ ಬರಗಾಲ ಎದುರಾಗಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆ ಎದುರಾಗಬಾರದು, ಈ ನಿಟ್ಟಿನಿಲ್ಲಿ ಮುಂಜಾಗ್ರತ ಕ್ರಮವಹಿಸಬೇಕು. ಜಲ ಜೀವನ್ ಮಿಷನ್ ಯೋಜನೆಯಡಿ ಕೊರೆದಿರುವ ಕೊಳವೆಬಾವಿಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ, ಮೋಟಾರ್ ಪಂಪ್ ಅಳವಡಿಸಿ ನೀರು ಪೂರೈಕೆ ಮಾಡಬೇಕು. ಖಾಸಗಿ ಕೊಳವೆಬಾವಿ ಹಾಗೂ ನೀರಿನ ಟ್ಯಾಂಕರ್ ಗಳನ್ನು ಅತಿ ಅವಶ್ಯಕತೆ ಇದ್ದಾಗ ಮಾತ್ರ ಬಳಸಿಕೊಳ್ಳಿ. ತಾಲೂಕಿನ ಯಾವುದೇ ವಾರ್ಡ್, ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ, ಜಾನುವಾರುಗಳಿಗೆ ಮೇವು ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ, ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿ, ಬೆಳೆ ಪರಿಹಾರವನ್ನು ಅರ್ಹ ರೈತರಿಗೆ ತಲುಪಿಸಬೇಕು. ಬೆಳೆ ವಿಮೆ ಯೋಜನೆ ಅಡಿ ನೋಂದಾಯಿತ ರೈತರಿಗೆ ಪ್ರೋತ್ಸಾಹ ನೀಡಿ. ರೇಷ್ಮೆ ಬೆಳೆಯನ್ನು ವಿಮಾ ಯೋಜನೆಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದರು.
ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಜಾಗಕ್ಕೆ ಸೂಕ್ತ ಬಂದೋಬಸ್ತ್ ಮಾಡಬೇಕಿದ್ದು, ಒಂದು ತಿಂಗಳ ಒಳಗಾಗಿ ಸರ್ವೇ ಕಾರ್ಯ ನಡೆಸಿ, ಒತ್ತುವರಿ ಆಗಿದ್ದಲ್ಲಿ ತೆರವುಗೊಳಿಸಿ ಕಲ್ಲು ಹಾಕಿಸಿ ಎಂದರು. ಜೊತೆಗೆ ನಗರ ಸಭೆ ವತಿಯಿಂದ ಶಾಲೆಗಳ ಜಾಗದ ಇ-ಖಾತೆ ಮಾಡಿಸಿ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಅಗತ್ಯ ಕ್ರಮ ವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ ಬಂದ್ ಆಗಬೇಕು. ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಸೂಕ್ತ ಕ್ರಮವಹಿಸಬೇಕು. ಕಾನೂನು ಮೀರಿ ವ್ಯಾಪಾರ ನಡೆಸುವ ಬಾರ್‌ಗಳಿಗೆ ನೋಟಿಸ್ ನೀಡಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಅಬಕಾರಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ತಾಲೂಕಿನ ತಾಯಿ ಮಗು ಆಸ್ಪತ್ರೆಯ ನಿರ್ವಹಣೆ ಬಗ್ಗೆ ಶಾಸಕರು ಅಸಮಾಧನ ವ್ಯಕ್ತಪಡಸಿ, ಗುತ್ತಿಗೆಪಡೆದಿರುವವರ ಜೊತೆ ಜಂಟಿ ಸಭೆಯನ್ನು ಆಯೋಜಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಪಂ ಕಾರ್ಯನಿರ್ವಾಹಕಾಧಿಕಾರಿ ಎನ್. ಮುನಿರಾಜು, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.