ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಜನರ ಬಗ್ಗೆ ಕಾಳಜಿ ಇದೆ. ಬೆಲೆ ಏರಿಕೆ ಮಾಡಿ ಜನರ ಜೀವನದ ಬರೆ ಎಳೆಯುವ, ಸೇವಾ ಮನೋಭಾವ ಇಲ್ಲದ ಬಿಜೆಪಿ ಪಕ್ಷವನ್ನು ಮನೆಗೆ ಕಳುಹಿಸಿ ಎಂದು ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ತಿಳಿಸಿದರು.
ನಗರದ ಕರೇನಹಳ್ಳಿ ವಾರ್ಡ್ ನಲ್ಲಿ ಚುನಾವಣಾ ಪ್ರಚಾರದ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆ, ಸವಲತ್ತುಗಳನ್ನು ವಜಾಗೊಳಿಸಿರುವ ಬಿಜೆಪಿ ಸರ್ಕಾರ ಎಂದು ಕಿಡಿಕಾರಿದರು.
ಕರೇನಹಳ್ಳಿ ವಾರ್ಡ್ ನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಮಾಡಿ ಸಿಂಗಪುರವನ್ನಾಗಿ ಮಾಡುತ್ತೇನೆ, ಆದ್ದರಿಂದ ನಿದ್ದೆಗಣ್ಣಿನಲ್ಲಿ ಕೂಡ ಕಾಂಗ್ರೆಸ್ ಗೆ ಮತ ನೀಡಿ, ಅಭಿವೃದ್ಧಿ ಕೆಲಸಗಳನ್ನು ಆಶಿಸಿ ಎಂದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಇದ್ದಂತಹ ಯಾವೊಂದು ಭರವಸೆಯನ್ನು ಈಡೇರಿಸಿಲ್ಲ, ಇನ್ನೂ ಜಿಎಸ್ ಟಿ, ನೋಟು ಅಮಾನೀಕರಣ ಸೇರಿದಂತೆ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದು ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಅಚ್ಛೇದಿನ್ ಮಾಡುವ ಆಸ್ವಾಸನೆ ಕೊಟ್ಟ ಬಿಜೆಪಿ. ಅಧಿಕಾರಕ್ಕೆ ಬಂದ ಮೇಲೆ ಒಂದೊಂದೇ ಯೋಜನೆ ಬಂದ್ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆ, ಯೋಜನೆ, ಕೊಡುಗೆ ಶುನ್ಯವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿತ್ತೇವೆ, ರೈತ ಸ್ನೇಹಿ ಯೋಜನೆ ಜಾರಿಗೆ ತರಲಾಗುವುದು, ಪ್ರತಿ ಕುಟುಂಬದ ಯಜಮಾನಿಗೆ, ನಿರುದ್ಯೋಗ ಯುವಕ ಯುವತಿಯರಿಗೆ, ವೃದ್ಧರಿಗೆ ಪ್ರತಿ ತಿಂಗಳು ಇಂತಿಷ್ಟು ಎಂದು ಸಹಾಯ ಧನ ನೀಡಲಾಗುವುದು. ಹಸ್ತದ ಗುರುತು ಶಾಂತಿ ಹಾಗೂ ಅಭಿವೃದ್ಧಿ ಸಂಕೇತ ಆದ್ದರಿಂದ ಶಾಂತಿ ಹಾಗೂ ಅಭಿವೃದ್ಧಿ ಗೆ ಕಾಂಗ್ರೆಸ್ ಮತ ನೀಡಿ ಎಂದರು.
ಶಾಂತಿನಗರ ರಸ್ತೆಗಳಿಗೆಸಂಪೂರ್ಣ ಕಾಂಕ್ರಿಟ್ ರಸ್ತೆ ನಿರ್ಮಾಣ.. ಸ್ತ್ರೀ ಶಕ್ತಿಗಳ ಜೊತೆ ಸಭೆ ಮಾಡವ್ರೆ. ಕೊರೊನಾ ಅವಧಿಯಲ್ಲಿ ನಾನು ಕಳೆದು ಹೋಗಿದ್ದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೊರೊನಾದಲ್ಲಿ 40 ಪಾಯಿಂಟ್ ಗಳಲ್ಲಿ ಅನ್ನದಾನ, ಚಾಲಕರಿಲ್ಲದೇ ನಾನೇ ಡ್ರೈವಿಂಗ್ ಮಾಡುಕೊಂಡು ಅರಿವು ಮೂಡಿಸಿದ್ದೇನೆ. ಎಚ್ಚರದಿಂದ ಇರಬೇಕು. ಕರೇನಹಳ್ಳಿಯನ್ನು ಸಿಂಗಾಪುರ ಮಾಡ್ತೀನಿ. ಮಧುರೆ ಹೋಬಳಿಯಲ್ಲಿ ಶೇ 90 ಕೆಲಸಗಳಾಗಿವೆ. ಮಾದರಿ ತಾಲೂಕು ಮಾಡಿಕೊಡುತ್ತೇನೆ ಎಂದರು.
ಕರೇನಹಳ್ಳಿ ಭಾಗಕ್ಕೆ ಶಾಸಕರು ಮಾಡಿರುವ ಅಭಿವೃದ್ದಿ ಹೇಳತೀರದು. 2013ರಲ್ಲಿ ಶಾಸಕರುಕೊಟ್ಟ ಮಾತಿನಂತೆ ಕರೇನಹಳ್ಳಿಯನ್ನ ಬಿಳೇನಹಳ್ಳಿ ಮಾಡುತ್ರೇವೆ ಎಂದು ಹೇಳಿದ್ದರು. ಈ ಭಾಗದಲ್ಲಿ ರಸ್ತೆ, ಚರಂಡಿ ದುರಸ್ತಿ ಸೇರಿದಂತೆ ಇತರೆ ಮುಲಸೌಕರ್ಯ ಒದಗಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ಹೇಮಂತರಾಜು ಹೇಳಿದರು.
ನೇಯ್ಗೆ ಉದ್ಯಮ ಊರಿನ ಹೊರಗೂ ವಿಸ್ತರಿಸಿದೆ. ಹೆಚ್ಚು ನೇಕಾರರಿರುವ ಪ್ರದೇಶ ಕರೇನಹಳ್ಳಿಯಾಗಿದೆ. ನೇಯ್ಗೆ ಉದ್ಯಮ ಉಸಿರಾಡಲು ಕಾಂಗ್ರೆಸ್ ನೇತಾರ ಸಿದ್ದರಾಮಯ್ಯ ಕಾರಣ ಎಂದರು.
20 ಎಚ್.ಪಿ ವಿದ್ಯುತ್ ನ್ನು ಉಚಿತವಾಗಿ ಕೊಡುವ ಭರವಸೆ ಕಾಂಗ್ರೆಸ್ ನೀಡಿದೆ, ಇತಿಹಾಸಲ್ಲಿ ನೇಕಾರರಿಗೆ ಮನೆ ಕಟ್ಟಿಕೊಡಲು ಸಹಾಯಧನ ನೀಡಿತು. 175 ಮನೆ ಕೊಟ್ಟಿದ್ದಾರೆ. ಕರೇನಹಳ್ಳಿ ಹಾಗೂ ದರ್ಗಾ ಜೋಗಹಳ್ಳಿಯಲ್ಲಿ ಗುಂಪು ಮನೆ ಕಟ್ಟಿಕೊಡುವ ಯೋಜನೆ ಇದೆ. ಶಾಸಕರ ಋಣ ತೀರಿಸಬೇಕಿದೆ. ಮತ ಭಿಕ್ಷೆ ಹಾಕಬೇಕಾಗಿದೆ ಎಂದು ತಿಳಿಸಿದರು.
ನಂತರ ನಗರಸಭಾ ಸದಸ್ಯ ಮೋಹನ್ ಕುಮಾರ್ ಮಾತನಾಡಿ, ಯಾವ ವಾರ್ಡಿನಲ್ಲೂ ಆಗದ ಅಭಿವೃದ್ಧಿ ಇಲ್ಲಾಗಿದೆ. ಜನರ ಕಷ್ಟ ಸುಖ ಅರಿತು, ರಸ್ತೆಗಳಿಗೆ ಕಾಂಕ್ರಿಟ್ ಹಾಕಿದ್ದಾರೆ. ಓವರ್ ಟ್ಯಾಂಕ್ ನಿರ್ಮಾಣ ಆಗುತ್ತಿದೆ. ಸದ್ಯ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು.
ಈ ವೇಳೆ ಲಕ್ಷ್ಮಿಪತಿ, ರಾಜಘಟ್ಟ ರವಿ, ಕೆ.ಪಿ.ಜಗನ್ನಾಥ್, ರಾಜೇಂದ್ರ ಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.