ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ರೋಡ್ ಶೋ ವೇಳೆ ವ್ಯಕ್ತಿಯೋರ್ವ ಅವರ ಕಾರಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ….
ವೈಎಸ್‌ಆರ್‌ಸಿಪಿ ಪಕ್ಷದ ಬೆಂಬಲಿಗ ಚೀಲಿ ಸಿಂಗಯ್ಯ (54) ಮೃತ ದುರ್ವೈವಿ.
ಪಲ್ನಾಡು ಜಿಲ್ಲೆಗೆ ಭೇಟಿ ನೀಡಿದ್ದಾಗ ಈ ಅವಘಡ ಸಂಭವಿಸಿದೆ. ಗುಂಟೂರು ಜಿಲ್ಲೆಯ ಎಟುಕುರು ಬಳಿಯ ಲಾಲ್‌ಪುರಂ ಹೆದ್ದಾರಿಯಲ್ಲಿ ವೈಎಸ್‌ಆರ್‌ಸಿಪಿ ಆಯೋಜಿಸಿದ್ದ ರ್ಯಾಲಿ ವೇಳೆ ಜಗನ್ ಪ್ರಯಾಣಿಸುತ್ತಿದ್ದ ಕಾರು ವ್ಯಕ್ತಿ ಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಜಗನ್ ಮೋಹನ್ ರೆಡ್ಡಿ ಅವರನ್ನು ನೋಡಲು ರಸ್ತೆ ಬದಿ ನೂರಾರು ಸಂಖ್ಯೆಯಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ನೆರೆದಿದ್ದರು. ಅಲ್ಲದೇ ಜಗನ್ ಗೆ ಹಾರ ಹಾಕಿ ಕೈ ಕುಲುಕಲು ಮುಗಿಬಿದ್ದಿದ್ದು, ಜಗನ್ ಕಾರಿನ ಡೋರ್ ತೆಗೆದು ಅಭಿಮಾನಿಗಳತ್ತ ಕೈಬಿಸುತ್ತಿದ್ದರೆ, ಇತ್ತ ಚಾಲಕನ ಕಡೆಗೆ ಅಭಿಮಾನಿ ಸಿಂಗಯ್ಯ ಕಾರಿನ ಮುಂಭಾಗದಲ್ಲಿ ಬಿದ್ದಿದ್ದಾನೆ. ಇದನ್ನು ಗಮನಿಸದ ಚಾಲಕ ಹಾಗೇ ಕಾರು ಚಲಾಯಿಸಿದ್ದು, ಕಾರಿನ ಮುಂದಿನ ಗಾಲಿ ಸಿಂಗಯ್ಯನ ತಲೆ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಅಸುನೀಗಿದ್ದಾನೆ.
ಜೂನ್ 18ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಗಳು ವ್ಯಕ್ತವಾಗುತ್ತಿವೆ.