ಐಸಿಸಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಹತ್ತೊಂಭತ್ತು ವರ್ಷದೊಳಗಿನ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಶೆಫಾಲಿ ವರ್ಮಾ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿಯೂ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶಿಸಿದ ಶೆಫಾಲಿ ಪಡೆ ಹೊಸ ಇತಿಹಾಸ ಬರೆಯುವ ಮೂಲಕ ನಾಯಕಿ ಶೆಫಾಲಿ ಕಪಿಲ್ ದೇವ್, ಮಹೇಂದ್ರ ಸಿಂಗ್ ದೋನಿ, ವಿರಾಟ್ ಕೊಹ್ಲಿ ರಂತಹ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡ ಎದುರಾಳಿಗಳಿಗೆ ಮೇಲೆಳಲು ಬಿಡಲೇ ಇಲ್ಲ, ಉತ್ತಮ ಬೌಲಿಂಗ್ ಪ್ರದರ್ಶಿಸಿ 68 ರನ್ ಗಳಿಗೆ ಎದುರಾಳಿಗಳನ್ನು ಆಲೌಟ್ ಮಾಡುವ ಮೂಲಕ ಸುಲಭದ ಗೆಲುವಿಗೆ ಅಡಿಪಾಯ ಹಾಕಿದರು.
ಭಾರತದ ಪರವಾಗಿ ಸೌಮ್ಯ ತಿವಾರಿ (24) ಹಾಗೂ ಗೊಂಗಾಡಿ ತ್ರಿಷಾ (24) ಅವರ ಸಂಘಟಿತ ಹೋರಾಟದ ಫಲವಾಗಿ ಭಾರತ ತಂಡ 7 ವಿಕೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ನಾಯಕಿಯ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡಿದರು.
ಕಳೆದ ವರ್ಷ ನಡೆದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಸೋತು ಕಣ್ಣೀರಿಟ್ಟಿದ್ದ ಶೆಫಾಲಿ ವರ್ಮಾ ನಾಯಕಿಯಾಗಿ ಅಂಡರ್ 19 ವಿಶ್ವಕಪ್ ಗೆದ್ದು ಆ ನೋವನ್ನು ಮರೆತರು, ಜೊತೆಗೆ ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ, ಪೃಥ್ವಿ ಶಾ, ಉನ್ಮಕ್ ಚಂದ್ ಹಾಗೂ ಯಶ್ ಧೂಳ್ ಅವರ ಸಾಲಿಗೆ ಸೇರ್ಪಡೆಯಾಗುವ ಮೂಲಕ ಐಸಿಸಿ ಟ್ರೊಫಿ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.