ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿ: ಭೂಮಿ ಕಳೆದುಕೊಂಡ ರೈತರ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಕೋಲಾರ: ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ಗಡಿಭಾಗದ ಚುಕ್ಕನಹಳ್ಳಿ, ಏತರನಹಳ್ಳಿ ರೈತರ ೨ನೇ ಕಂತಿನ ಮರಗಿಡಗಳ ಪರಿಹಾರವನ್ನು ಬಿಡುಗಡೆ ಮಾಡಿ ವರದಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರೈತಸಂಘದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡು ದಶಕ ಕಳೆದರೂ ಮರಗಿಡಗಳ ೨ನೇ ಪರಿಹಾರದ ಜೊತೆಗೆ ಹೆಚ್ಚಿನ ಭೂ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು ವಿಫಲವಾಗಿ ರೈತರ ಜೊತೆ ಚೆಲ್ಲಾಟವಾಡುತ್ತಿದ್ದರೂ ನೊಂದ ರೈತರ ಪರ ಧ್ವನಿ ಎತ್ತದ ಜನಪ್ರತಿನಿಧಿಗಳ ವಿರುದ್ಧ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ವರ್ಷಗಳಿಂದ ಸ್ವಾಧೀನದಲ್ಲಿರುವ ಕೃಷಿ ಭೂಮಿಯನ್ನು ರಸ್ತೆ ಅಭಿವೃದ್ಧಿಗೆ ರೈತರ ಮೇಲೆ ದಬ್ಬಾಳಿಕೆ ಮಾಡಿ ಭೂಸ್ವಾಧೀನ ಮಾಡಿಕೊಂಡಂತೆ ಕಂದಾಯ ನಿಯಮದ ಪ್ರಕಾರ ರೈತರಿಗೆ ಪರಿಹಾರವನ್ನು ನೀಡಬೇಕಲ್ಲವೇ ಎಂದು ಪ್ರಶ್ನೆ ಮಾಡುವ ಜೊತೆಗೆ ಕೊಳತೂರಿನಿಂದ ಕೆಜಿಎಫ್ ವರೆಗಿನ ರೈತರಿಗೆ ಹೆಚ್ಚಿನ ಭೂ ಪರಿಹಾರ ನೀಡಲು ಯಾವುದೇ ವರದಿ ಬೇಕಾಗಿಲ್ಲ. ಆದರೆ, ಗಡಿಭಾಗದ ರೈತರು ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಪ್ರತಿಯೊಂದಕ್ಕೂ ವರದಿ ವರದಿ ಎಂದು ಅಮಾಯಕ ರೈತರನ್ನು ಬೇರೆ ರಾಜ್ಯದ ರೈತರೆಂದು ಕಾಣುತ್ತಿರುವುದು ನ್ಯಾಯವೇ ಎಂದರು.

ಪರಿಹಾರ ವಂಚಿತ ನೊಂದ ರೈತರಾದ ಜನಾರ್ಧನ್ ಹಾಗೂ ರಾಜಣ್ಣ ಮಾತನಾಡಿ, ಇರುವ 2-3 ಎಕರೆ ಕೃಷಿ ಜಮೀನನ್ನು ಅಧಿಕಾರಿಗಳು ಕಾನೂನಿನ ಭಯ ಹುಟ್ಟಿಸಿ ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಂಡು ಭಿಕ್ಷುಕರ  ರೀತಿಯಲ್ಲಿ ಪ್ರತಿ ಎಕರೆಗೆ 3.80 ಲಕ್ಷ ರೂ. ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ. ಹೆಚ್ಚಿನ ಪರಿಹಾರ ಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಪರಿಹಾರ ಹೆಚ್ಚಿಗೆ ನೀಡುವ ನಿರೀಕ್ಷೆಯಲ್ಲಿದ್ದ ನಮಗೆ ಮಾನ್ಯರು ತಾಲೂಕು ಆಡಳಿತ ಮತ್ತು ಸರ್ವೇ ಇಲಾಖೆಯಿಂದ ವರದಿ ಕೇಳಿದ್ದು, ಆ ವರದಿಯನ್ನು 4 ತಿಂಗಳಿಂದ ನೀಡದೆ ಮುಳಬಾಗಲು ತಾಲೂಕು ಆಡಳಿತ, ಸರ್ವೇ ಇಲಾಖೆ ರೈತರನ್ನು ನಿರ್ಲಕ್ಷ ಮಾಡುತ್ತಿದೆ ಎಂದು ಆರೋಪಿಸಿದರು.

ಒಂದು ಕಡೆ ಹೆಚ್ಚಿನ ಪರಿಹಾರವೂ ಇಲ್ಲ, ಮತ್ತೊಂದು ಕಡೆ ಭೂಸ್ವಾಧೀನವಾದ ಜಮೀನಿನಲ್ಲಿದ್ದ ಮರಗಿಡಗಳ 2ನೇ ಕಂತಿನ 1.17 ಕೋಟಿ ಚಿತ್ತೂರು ಪಿಡಿ ಖಾತೆಯಲ್ಲಿರುವ ಹಣ ಬಿಡುಗಡೆ ಪ್ರಕರಣವೂ ಸಹ ಜಿಲ್ಲಾಧಿಕಾರಿಗಳ ಅಂಗಳದಲ್ಲಿದ್ದು, ಕೂಡಲೇ ಮಾನ್ಯರು ಎರಡೂ ಪ್ರಕರಣಗಳನ್ನು ಕಾನೂನಿನ ಪ್ರಕಾರ ಬಗೆಹರಿಸಿ ನ್ಯಾಯ ಕೊಡಿಸಿಕೊಡಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಂಗಳ ಅವರು, ನಿಮ್ಮ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ವರದಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಂಗೇಗೌಡ, ರಾಜಣ್ಣ, ನಟರಾಜ್, ವಿಶ್ವ, ವಿ.ಸಿ.ವೆಂಕಟರವಣಪ್ಪ, ಕುಮಾರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *