ಭೂ ವ್ಯವಹಾರವನ್ನು ಮಾಡಿಸಿದ್ದ ಮಧ್ಯವರ್ತಿಯೊಬ್ಬ ಜಮೀನು ಖರೀದಿ ಮಾಡಿದ್ದವರಿಂದ ಕಮಿಷನ್ ಹಣಕ್ಕಾಗಿ ಚೆಕ್ ಪಡೆದುಕೊಂಡು ಆ ಚೆಕ್ ಅನ್ನು ತಿದ್ದಿ, ಹಣವನ್ನು ಬ್ಯಾಂಕ್ ನಲ್ಲಿ ಡ್ರಾ ಮಾಡಿಕೊಳ್ಳಲು ಹೋಗಿದ್ದಾಗ ಚೆಕ್ ನ ಅಸಲಿ ಸತ್ಯ ಬಯಲಾಗಿ ಖದೀಮ ಜೈಲುಪಾಲಾಗಿದ್ದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ದರ್ಗಾಪುರ ಸರ್ವೆ ನಂಬರ್ 32/6 ಮತ್ತು 32/4 ರಲ್ಲಿ ಒಟ್ಟು ಎರಡು ಎಕರೆಯನ್ನು ಜಮೀನು ಮಾಲೀಕರಿಂದ ಆಂಜಿನಪ್ಪ ಎಂಬುವರು ಜಿಪಿಎ ಮಾಡಿಸಿಕೊಂಡಿದ್ದಾರೆ. ಈ ವ್ಯವಹಾರನ್ನು ಎಂ.ಸಿ ಚಂದ್ರಶೇಖರ್ ಎಂಬಾತನ ಮುಂದಾಳತ್ವದಲ್ಲಿ ನಡೆದಿತ್ತು. ಸದರಿ ಕೆಲಸಕ್ಕೆ ಮಧ್ಯವರ್ತಿಯ ಏಜೆಂಟ್ ಕಮಿಷನ್ ಆಗಿ 10 ಲಕ್ಷ ರೂ. ಮಾತನಾಡಿದ್ದರು. ಇದಕ್ಕಾಗಿ ಜಮೀನು ಖರೀದಿ ಮಾಡಿದ್ದ ಆಂಜಿನಪ್ಪ, ಚಂದ್ರಶೇಖರ್ ಅವರಿಗೆ ತಲಾ 5 ಲಕ್ಷ ರೂ.ಗಳ ಎರಡು ಚೆಕ್ ಗಳನ್ನು ನೀಡಿದ್ದರು.
ಮೊದಲ ಚೆಕ್ ನ್ನು ಡ್ರಾ ಮಾಡಿಕೊಂಡಿದ್ದ ಚಂದ್ರಶೇಖರ್ ಎರಡನೇ ಚೆಕ್ ಡ್ರಾ ಮಾಡಿಕೊಳ್ಳುವ ಮುನ್ನಾ ಅತಿಯಾಸೆಗೆ ಬಿದ್ದು 5 ಎಂಬ ಅಂಕಿಯ ಮುಂದೆ ಯಾವುದೇ ಅನುಮಾನ ಬಾರದಂತೆ ಅಂಕಿ ಮತ್ತು ಅಕ್ಷರಗಳಲ್ಲಿ 6 ಎಂಬ ನಂಬರನ್ನು ಬರೆದು ಬ್ಯಾಂಕ್ ನಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳಲು ಹೋಗಿದ್ದಾನೆ.
ಚೆಕ್ ನೋಡಿದ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಚೆಕ್ ಖಾತೆಯ ಗ್ರಾಹಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಳಿಕ ಚೆಕ್ ಮಾಲೀಕನು ನಾನು ಕೇವಲ 5 ಲಕ್ಷ ರೂಪಾಯಿಯ ಚೆಕ್ ಕೊಟ್ಟಿದ್ದೇನೆ. 65 ಲಕ್ಷ ರೂ. ಚೆಕ್ ಕೊಟ್ಟಿಲ್ಲ ಎಂದು ಹೇಳಿದಾಗ ಮಧ್ಯವರ್ತಿ ಚಂದ್ರಶೇಖರ್ ಅಸಲಿ ಸತ್ಯ ಹೊರ ಬಂದಿದೆ.
ಇದರಿಂದ ಎಚ್ಚೆತ್ತ ಆಂಜಿನಪ್ಪ ಚೆಕ್ ತಿದ್ದಿ ನಂಬಿಕೆ ದ್ರೋಹ ಎಸಗಿದ ಚಂದ್ರಶೇಖರ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯ ನ್ನು ಜೈಲಿಗಟ್ಟಿದ್ದಾರೆ. ಸದ್ಯ ಜಾಮೀನು ಪಡೆದು ಹೊರ ಬಂದಿರೋ ಆರೋಪಿ.
ಜಮೀನು ವ್ಯವಹಾರ ಮಾಡಿಸಿಕೊಟ್ಟ ವಿಶ್ವಾಸಕ್ಕೆ 5 ಲಕ್ಷ ರೂ.ಗಳ ಎರಡು ಚೆಕ್ ಗಳನ್ನು ನೀಡಿದ್ದೇವು, ಅತಿಯಾಸೆಗೆ ಬಿದ್ದ ಮಧ್ಯವರ್ತಿ ಚಂದ್ರಶೇಖರ್ ಚೆಕ್ ತಿದ್ದಿ ಡ್ರಾ ಮಾಡಿಕೊಳ್ಳಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ನಂಬಿಕೆ, ವಿಶ್ವಾಸ ದ್ರೋಹಿಗಳಿಗೆ ಕಾನೂನು ರೀತಿಯಾಗಿ ಶಿಕ್ಷೆಯಾಗಬೇಕು ಎಂದು ಚೆಕ್ ಮಾಲೀಕ ಆಂಜಿನಪ್ಪ ತಿಳಿಸಿದ್ದಾರೆ.